ಬೆಂಗಳೂರು: ಕೊರೋನಾದಿಂದ ದೇವರೇ ಕಾಪಾಡಬೇಕು ಅನ್ನೋ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಧಿಕಾರಕ್ಕಾಗಿ ಬಿಜೆಪಿಯವರು ಏನೇನೋ ಮಾಡಿದ್ರು. ಈಗ ನಮ್ಮ ಕೈಲಿ ಆಗಲ್ಲ ಅಂತಾರೆ. ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಯಾಕಿರ್ಬೇಕು. ಒಂದು ಕ್ಷಣವೂ ವೇಸ್ಟ್ ಮಾಡದೆ ರಾಜೀನಾಮೆ ನೀಡಲಿ. ಗೌವರ್ನರ್ ರೂಲ್ ಬರಲಿ, ಅವರೇ ನಡೆಸ್ತಾರೆ. ಕೊರೋನಾ ಸಂದರ್ಭದಲ್ಲಿ ನಾವು ರಾಜಕೀಯ ಮಾಡಿಲ್ಲ ಸಂಪೂರ್ಣ ಸಹಕಾರ ನೀಡಿದ್ದೆವು. ಆದರೂ ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಏನ್ಮಾಡ್ಬೇಕು ಅಂತಾ ಕಿಡಿಕಾರಿದ್ರು.
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೊನಾ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕಿದ್ದೀರಿ ಎಂದು ಸಚಿವ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.









