ಸಿಇಟಿ ಪರೀಕ್ಷಾ ಕೇಂದ್ರ ಪರಿಶೀಲಿಸಿದ ಡಿಸಿಎಂ

0
4

ಬೆಂಗಳೂರು: ನಾಳೆ ಮತ್ತು ನಾಡಿದ್ದು ನಡೆಯಲಿರುವ ಸಿಇಟಿ ಪರೀಕ್ಷೆಯ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಲ್ಲೇಶ್ವರದ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಪರೀಕ್ಷಾ ಕೇಂದ್ರವನ್ನು ಕೂಲಂಷವಾಗಿ ಪರಿಶೀಲಿಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಗಮನಿಸಿದರು. ವಿದ್ಯಾರ್ಥಿಗಳು ಕೂರುವ ಅಂತರ, ಕೊಠಡಿಗಳ ಸ್ಯಾನಿಟೈಶೇಷನ್, ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್, ಭದ್ರತೆ, ಸಾರಿಗೆ, ಮೂಲಸೌಕರ್ಯ ಮತ್ತಿತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಅವರು, ಸಿಇಟಿ ಪರೀಕ್ಷೆ ಬಗ್ಗೆ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲೂ ನಿರಾತಂಕವಾಗಿ ಪರೀಕ್ಷೆ ನಡೆಸಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸವಾಲಿನ ನಡುವೆಯೂ ನಾವು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ರೀತಿ ದ್ವಿತೀಯ ಪಿಯುಸಿಯ ಒಂದು ವಿಷಯದ ಪರೀಕ್ಷೆಯನ್ನು ಕೂಡ ನಿರಾತಂಕವಾಗಿ ನಡೆಸಿದ್ದೇವೆ. ಈ ಪರೀಕ್ಷೆಯನ್ನೂ ಯಾವುದೇ ತೊಂದರೆ ಇಲ್ಲದೆ ನಡೆಸಲು ಸರಕಾರಕ್ಕೆ ಸಾಧ್ಯವಿದೆ ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳೀದರು.

ಏಪ್ರಿಲ್ 23-24ಕ್ಕೇ ಸಿಇಟಿ ಪರೀಕ್ಷೆ ನಿಗದಿಯಾಗಿತ್ತು. ಕೋವಿಡ್ ಲಾಕ್’ಡೌನ್ ಇದ್ದ ಕಾರಣಕ್ಕೆ ಮುಂದೂಡಲಾಯಿತು. ಮೇ 12ರಂದು ಜುಲೈ 30-31ರಂದು ಪರೀಕ್ಷೆ ನಡೆಸುವುದು ಎಂದು ನಿರ್ಧರಿಸಲಾಯಿತು. ಆ ಕ್ಷಣದಿಂದಲೇ ಸರಕಾರವೂ ಕೋವಿಡ್ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಸಾರಿಗೆ, ವೈದ್ಯಕೀಯ, ರಕ್ಷಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಯಿತು. ಕೋವಿಡ್ ಪಾಸಿಟೀವ್ ಬಂದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಕಂಟೈನ್ಮೆಂಟ್ ಝೋನ್’ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಬ್ಬರ ಜತೆ ಹೊರಬಂದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್, ದೈಹಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.

- Call for authors -

LEAVE A REPLY

Please enter your comment!
Please enter your name here