ನವದೆಹಲಿ: ರಾಜಸ್ಥಾನದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದ ಒಂದು ತಿಂಗಳಿಂದ ಪತನದಂಚಿನಲ್ಲಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಕೊಂಚ ಗಟ್ಟಿಯಾಗಿದೆ. ನಮ್ಮಲ್ಲಿದ್ದಿದ್ದು ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಷ್ಟೇ ಎನ್ನುವ ಮೂಲಕ ಕೈ ಪಕ್ಷದೊಂದಿಗಿನ ತಮ್ಮ ಹಾದಿ ಗಟ್ಟಿಗೊಳಿಸಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದ ರಾಜಸ್ಥಾನದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ಸುಖಾಂತ್ಯ ಕಂಡಿದೆ.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದು ಡಿಸಿಎಂ ಸ್ಥಾನ ಕಳೆದುಕೊಂಡಿದ್ದ ಸಚಿನ್ ಪೈಲೆಟ್ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಮರಳಿದ್ದಾರೆ. ಬಂಡಾಯ ಕುರಿತು ತಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರೊಂದಿಗೆ ಹಲವು ತಾಸು ಮಾತುಕತೆ ನಡೆಸಿ ಬಿಕ್ಕಟ್ಟು ಬಗೆ ಹರಿಸಿಕೊಂಡಿದ್ದಾರೆ. ಇನ್ನೂ ಈ ಕುರಿತು ಸ್ವತಂ ಮಾಜಿ ಡಿಸಿಎಂ ಸಚಿನ್ ಪೈಲಟ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದು, ನಮ್ಮ ನಡುವೆ ಇದ್ದದ್ದು ಕೇವಲ ಸೈದ್ಧಾಂತಿಕ ಬಿಕ್ಕಟ್ಟು ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇನ್ನೂ ಸಚಿನ್ ಪೈಲಟ್ ಜೊತೆ ಕೈ ಜೋಡಿಸಿದ್ದ ಬಂಡಾಯ ಶಾಸಕರ ಸಮಸ್ಯೆ ಬಗೆಹರಿಸಲು ಕೈ ನಾಯಕರು ಮುಂದಾಗಿದ್ದಾರೆ. ಬಂಡಾಯ ಶಾಸಕರು ಎತ್ತಿರುವ ವಿಷಯಗಳ ಬಗ್ಗೆ ಗಮನ ಹರಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆ. ಇನ್ನೂ ಪಕ್ಷ ಹಾಗೂ ರಾಜಸ್ಥಾನ ಸರ್ಕಾರದ ಹಿತಕ್ಕಾಗಿ ದುಡಿಯುವ ಬದ್ಧತೆಯನ್ನು ಸಚಿನ್ ಪೈಲಟ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 14 ಕ್ಕೆ ರಾಜಸ್ಥಾನ ವಿಧಾನ ಸಭೆಯಲ್ಲಿ ವಿಶೇಷ ಅಧಿವೇಷನ ನಡೆಯಲಿದ್ದು, ಬಹುಮತ ಸಾಭೀತು ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪೈಲಟ್ ಅವರ ತಂಡ ಮರಳಿ ಪಕ್ಷಕ್ಕೆ ಬಂದಿರುವುದರಿಂದ ಸರ್ಕಾರಕ್ಕೆ ಎದುರಾಗಿದ್ದ ಪತನದ ಭೀತಿ ದೂರವಾಗಿದೆ. ಈ ಬೆಳವಣಿಗೆಗಳ ಕುರಿತು ಮಾತನಾಡಿರೋ ಅಶೋಕ್ ಗೆಹ್ಲೋಟ್, ಬಿಜೆಪಿಯ ಪ್ರತಿಯೊಂದು ಕುತಂತ್ರವೂ ವಿಫಲವಾಗಿದೆ. ಬಿಜೆಪಿಗೆ ಇದೊಂದು ತಕ್ಕ ಪಾಠ, ಬಿಜೆಪಿ ನಾಯಕರಿಂದ ಆಡಳಿತ ಯಂತ್ರ ದುರುಪಯೋಗವಾಗಿದೆ. ನನ್ನ ಮೇಲೆ ಶಾಸಕರಿಗೆ ಸಂಪೂರ್ಣ ನಂಬಿಕೆ ಇದೆ. ಕಾಂಗ್ರೆಸ್ ನ ಒಬ್ಬ ಶಾಸಕರೂ ನಮ್ಮಿಂದ ದೂರವಾಗಿಲ್ಲ, 5 ವರ್ಷ ಅವಧಿ ಪೂರೈಸುತ್ತೇವೆಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.









