166 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

0
2

ಚಿಕ್ಕಬಳ್ಳಾಪುರ, ಆಗಸ್ಟ್ 12, ಬುಧವಾರ:ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ 166 ಫಲಾನುಭವಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಕ್ಕು ಪತ್ರ ವಿತರಿಸಿದರು.

ಸೂಲಕುಂಟೆಯಲ್ಲಿ ಬುಧವಾರ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ಹಕ್ಕುಪತ್ರ ವಿತರಿಸಿದ ಬಳಿಕ ಮಾತನಾಡಿದ ಸಚಿವರು, “ಕೆಲ ವರ್ಷಗಳ ಹಿಂದೆ ಕೊಟ್ಟ ಮಾತಿನಂತೆ ಈಗ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿದೆ. ಇಲ್ಲಿನ ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಸರ್ಕಾರದಿಂದ ಫಲಾನುಭವಿಗಳಿಗೆ ತಲಾ 1.20 ಲಕ್ಷ ರೂ. ನೀಡಲಿದ್ದು, ಮೂರ್ನಾಲ್ಕು ತಿಂಗಳಲ್ಲಿ ಮನೆ ನಿರ್ಮಿಸಿಕೊಳ್ಳಬಹುದು’’ ಎಂದು ವಿವರಿಸಿದರು.

“ಕಳೆದ ಎರಡು ತಿಂಗಳಿಂದ ಎಲ್ಲ ರೀತಿಯ ವೈಪರೀತ್ಯಗಳನ್ನು ನೋಡುತ್ತಿದ್ದೇವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು. ಕೃಷಿಗೆ ನೆರವಾಗಲು ಎಚ್‍ಎನ್ ವ್ಯಾಲಿಯಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಜಮೀನುಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಇತ್ತೀಚೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮೂರ್ನಾಲ್ಕು ತಿಂಗಳಲ್ಲಿ ಎಚ್‍ಎನ್ ವ್ಯಾಲಿಯಿಂದ 25 ರಿಂದ 26 ಕೆರೆಗಳಿಗೆ ನೀರು ಹರಿಸುತ್ತೇವೆ ಎಂದಿದ್ದಾರೆ’’ ಎಂದು ತಿಳಿಸಿದರು.

“ಜಿಲ್ಲೆಗೆ ನೀರು ಹರಿಸಲು ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಎಚ್‍ಎನ್ ವ್ಯಾಲಿಯಿಂದ ನೀರು ತುಂಬಿಸದ ಕೆರೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸಲಾಗುವುದು. ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ’’ ಎಂದು ಹೇಳಿದರು.

“ಎಸ್‍ಎಸ್‍ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. ಮೊದಲ ಸ್ಥಾನವನ್ನು ಮುಂದೆಯೂ ಕಾಪಾಡಿಕೊಳ್ಳಬೇಕು’’ ಎಂದರು.

ಕಮ್ಮತ್ತಹಳ್ಳಿ, ಯಲಗಲಹಳ್ಳಿ, ಮುದ್ದಲಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಹಕ್ಕುಪತ್ರ ವಿತರಿಸಿದರು. 4.69 ಕೋಟಿ ರೂ. ವೆಚ್ಚದಲ್ಲಿ ಬಾಗೇಪಲ್ಲಿಯಲ್ಲಿ ನಿರ್ಮಾಣವಾಗಲಿರುವ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಸೇರಿದಂತೆ 5 ಕೋಟಿ ರೂ. ಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಇದೇ ವೇಳೆ ಕೃಷಿ ಬೆಳೆ ಸಮೀಕ್ಷೆ ಮಾಡುವ ಆ್ಯಪ್ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಲತಾ ಉಪಸ್ಥಿತರಿದ್ದರು.

ಮುಲಾಜಿಲ್ಲದೆ ಕ್ರಮ:

ಬೆಂಗಳೂರಿನ ಗಲಭೆ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, “ಕಿಡಿಗೇಡಿಗಳ ವಿರುದ್ಧ ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ. ಸೂಕ್ತ ತನಿಖೆ ಬಳಿಕ ತಪ್ಪಿತಸ್ಥರ ಬಗ್ಗೆ ತಿಳಿದುಬರಲಿದೆ’’ ಎಂದರು.

“ಮಾಧ್ಯಮದವರ ಮೇಲೂ ಹಲ್ಲೆ ನಡೆದಿರುವುದು ದುರದೃಷ್ಟಕರ. ಬೆಂಗಳೂರಿನಲ್ಲಿ ಈ ರೀತಿಯ ವ್ಯವಸ್ಥಿತ ಪಿತೂರಿ ಹಿಂದೆ ನಡೆದಿರಲಿಲ್ಲ. ಜನರು ಆಟೊ, ಟೆಂಪೊಗಳಲ್ಲಿ ಬಂದು ಹಲ್ಲೆ ಮಾಡುವ ಘಟನೆ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆದರೆ ಜನರೇ ಹೀಗೆ ಕಾನೂನು ಕೈಗೆತ್ತಿಕೊಳ್ಳಬಾರದು. ಜಗತ್ತಿನ ಡೈನಾಮಿಕ್ ನಗರವೆಂದು ಹೆಸರಾಗಿರುವ ಬೆಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಹಾಳು ಮಾಡಬಾರದು’’ ಎಂದರು.

- Call for authors -

LEAVE A REPLY

Please enter your comment!
Please enter your name here