ಚಿಕ್ಕಬಳ್ಳಾಪುರ, ಆಗಸ್ಟ್ 15, ಶನಿವಾರ:ಜಿಲ್ಲೆಯ ಪ್ರತಿ ಯುವಕನಿಗೆ ಉದ್ಯೋಗ ದೊರೆಯುವಂತಾಗಲು ಕೈಗಾರಿಕಾ ವಲಯವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಡೆದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಹಾಗೂ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ನಿರೀಕ್ಷಿತ ಮಟ್ಟದ ಕೈಗಾರಿಕಾಭಿವೃದ್ಧಿ ಆಗಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ಜಿಲ್ಲೆಯ ಪ್ರತಿ ಯುವಕನಿಗೆ ಉದ್ಯೋಗ ದೊರಕಿಸಿಕೊಡಲಾಗುವುದು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ‘ಆತ್ಮನಿರ್ಭರ ಭಾರತ’ ಕಾರ್ಯವನ್ನು ಜಾರಿ ಮಾಡಲಾಗುವುದು ಎಂದರು.
ಎತ್ತಿನಹೊಳೆ ಯೋಜನೆ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಇನ್ನು ಮೂರು ವರ್ಷದ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಇದೆ ಎಂದು ತಿಳಿಸಿದರು.
ಇದೇ ವೇಳೆ ಕೊರೊನಾ ವಾರಿಯರ್ ಗಳನ್ನು ಸನ್ಮಾನಿಸಲಾಯಿತು. ಸಂಸದ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಪಾಲ್ಗೊಂಡಿದ್ದರು.
ಕಾರಂಜಿ ಉದ್ಘಾಟನೆ:
ಎಚ್ಎನ್ ವ್ಯಾಲಿ ನೀರು ಪಡೆದ ಕಂದವಾರ ಕೆರೆಯನ್ನು ಸುಂದರಗೊಳಿಸುವ ಕಾಮಗಾರಿ ನಡೆಸಲಾಗಿದೆ. ಕೆರೆಯಲ್ಲಿ ತೇಲುವ ಎರಡು ಕಾರಂಜಿಗಳನ್ನು ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.
ನಂತರ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ಚೀಗಟೇನಹಳ್ಳಿಯ ಮಾದರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲ್ಪಿಸಿದ ವಿವಿಧ ಮೂಲಸೌಕರ್ಯಗಳಿಗೆ ಚಾಲನೆ ನೀಡಲಾಯಿತು. ಹೊಸ ಗ್ರಂಥಾಲಯ, ಪ್ರಯೋಗಾಲಯ, ವಾಲಿಬಾಲ್ ಕೋರ್ಟ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಶಾಲೆ ಹೊಂದಿದೆ.
ಬಳಿಕ ರೆಡ್ಡಿಗೊಲ್ಲವಾರಹಳ್ಳಿಯ ಅಂಗನವಾಡಿ ಕೇಂದ್ರ ಮತ್ತು ಆವುಲನಾಗೇನಹಳ್ಳಿಯಲ್ಲಿ ಅರೂರು- ಪೆರೇಸಂದ್ರ ಗ್ರಾಮ ಪಂಚಾಯತಿಗಳ ಸಹಯೋಗದೊಂದಿಗೆ ನಿರ್ಮಿಸಿದ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ನಶಿಕುಂಟೆ ಹೊಸೂರು ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.

ಸಚಿವರ ಭಾಷಣದ ಇತರೆ ಅಂಶಗಳು:
ಇಂದಿನ ಗೌರಿಬಿದನೂರಿನ ವಿದುರಾಶ್ವತ್ಥ 2 ನೇ ಜಲಿಯನ್ ವಾಲಾಭಾಗ್ ಎಂದು ಹೆಸರಾಗಿದೆ. 1938 ರಲ್ಲಿ 9 ಹೋರಾಟಗಾರರು ಬ್ರಿಟಿಷರ ಗುಂಡೇಟಿಗೆ ಹುತಾತ್ಮರಾಗಿದ್ದರು.
ಸ್ವಾತಂತ್ರ್ಯ ದೊರೆತ ನಂತರದ 73 ವರ್ಷಗಳಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶ್ರಮದಿಂದ ಕೊರೊನಾ ಸಾವಿನ ಪ್ರಮಾಣ ಕಡಿಮೆ ಇದೆ. ಜಗತ್ತಿನ ಮರಣ ಪ್ರಮಾಣ ಸರಾಸರಿ 3.6 ರಿಂದ 3.7 ಇದ್ದು, ರಾಜ್ಯದಲ್ಲಿ ಶೇ.1.7 ರಿಂದ 1.8 ರಷ್ಟಿದೆ.
ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಗೂ ಹೆಚ್ಚು ಜಮೀನಿನಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಇದಕ್ಕೆ ಅಗತ್ಯವಾದ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸುವ ಉದ್ದೇಶವಿದೆ.
ಎಚ್‍ಎನ್ ವ್ಯಾಲಿಯಿಂದ ನೀರು ಶುದ್ಧೀಕರಿಸಿ ತಂದ ನೀರು ಈಗಾಗಲೇ ಜಿಲ್ಲೆಯ ಕೆರೆಗಳನ್ನು ತುಂಬಿದೆ.
ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಬೇರೆಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಸ್ಥಾನ ಕಾಪಾಡಿಕೊಳ್ಳಬೇಕು.
ಎರಡು ವರ್ಷಗಳಲ್ಲಿ 5 ಸಾವಿರ ಜನರಿಗೆ ಮನೆ ನಿರ್ಮಿಸಿಕೊಡುವ ಗುರಿ ಇದೆ.









