ಬೆಂಗಳೂರು: ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇರುತ್ತೇನೆ. ಬಿಜೆಪಿಯ ಪ್ರಶ್ನೆಯೇ ಇಲ್ಲ, ನಾನು ಕಾಂಗ್ರೆಸ್ ಗೆ ನಿಷ್ಠನಾಗಿದ್ದೇನೆ, ಕಾಂಗ್ರೆಸ್ ಪಕ್ಷದಲ್ಲೇ ಸಾಯೋವರೆಗೂ ಇರುತ್ತೇವೆ. ಮೋದಿಯವರಿಗೆ ಕನಸು ಮನಸಿನಲ್ಲೂ ಬೆಂಬಲ ಕೊಟ್ಟಿಲ್ಲ ಅಂತಾ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಭಾವುಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ನಾನು ಸಹಿ ಮಾಡಿದ ಪತ್ರದಲ್ಲಿ ನಾವು ನಾಯಕತ್ವ ಪ್ರಶ್ನೆ ಮಾಡಿಲ್ಲ. ನಾವು ನೇರವಾಗಿ ಸೋನಿಯಾ ಗಾಂಧಿ ಅವರಿಗೆ ಮಾತ್ರ ಒಂದು ಪ್ರತಿ ಪತ್ರ ಕೊಟ್ಟಿದ್ದೇವೆ. ಈ ಪತ್ರ ಲೀಕ್ ಮಾಡಿದವರು ಯಾರು..? ಈ ಪತ್ರ ಲೀಕ್ ಮಾಡಿದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷಿಣಿ ಸೋನಿಯಾ ಗಾಂಧಿಯವರು ತನಿಖೆ ಮಾಡಿಸಲಿ. ಯಾರು ಲೀಕ್ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಪಕ್ಷದ ಹಿತದೃಷ್ಟಿಯಿಂದ ಪತ್ರ ಬರೆದೆವು. ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಅಂತ ಇಬ್ಬಾಗ ಆದಾಗಲೂ ಸಹ ಈಗ ಯಾರು ಕಾಂಗ್ರೆಸ್ ಗೆ ವಿಧೇಯರು ಅಂತ ಹೇಳಿಕೊಳ್ಳುತ್ತಿದ್ದಾರೋ ಅವರೆಲ್ಲ ಅರಸು ಜೊತೆ ಹೋಗಿದ್ದರು. ಆದರೆ, ನಾವೆಲ್ಲ ಇಂದಿರಾ ಗಾಂಧಿಯವರ ಜೊತೆಯೆ ನಿಂತೆವು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನ ನಂಬಿ ಪಕ್ಷದಲ್ಲಿದ್ದೇವೆ. 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲೇಬೇಕು. ಈಗ ಪುನರ್ ಸಂಘಟನೆಗೆ ಒಂದು ಕಮಿಟಿ ಮಾಡಲಾಗಿದೆ, ಅದನ್ನು ಸ್ವಾಗತಿಸುತ್ತೇವೆ. ಸೋನಿಯಾ ಗಾಂಧಿಯವರ ಮುಂದುವರಿಕೆ ಸ್ವಾಗತಿಸುತ್ತೇವೆ ಎಂದು ಹೇಳಿದರು.









