ಡಿಕೆಶಿ ಮೇಲಿನ ದಾಳಿ ರಾಜಕೀಯ ಪ್ರೇರಿತವಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

0
2

ಮೈಸೂರು, ಅಕ್ಟೋಬರ್ 5, ಸೋಮವಾರ: ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ. ಅವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಬಿಐ, ಇಡಿ, ಐಟಿ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕೆ ವಿನಾ, ರಾಜಕೀಯ ಪ್ರೇರಿತವೆಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಇದು ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿದೆ. ಡಿ.ಕೆ.ಶಿವಕುಮಾರ್ ಅವರ ಮೇಲೆ ಹಿಂದೆಯೂ ದಾಳಿಯಾಗಿತ್ತು. ಇದು ಮುಂದುವರಿದ ಶೋಧವಾಗಿದೆ,” ಎಂದು ಸ್ಪಷ್ಟಪಡಿಸಿದರು.

“ಇದು ರಾಜಕೀಯ ಪ್ರೇರಿತವೇ ಆಗಿದ್ದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಬೇರೆ ನಾಯಕರೇ ಇಲ್ಲವೇ? ಶಿವಕುಮಾರ್ ಅವರಿಗಿಂತ ಐದು ವರ್ಷ ಸರ್ಕಾರ ನಡೆಸಿದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಮೇಲೆ ಏಕೆ ದಾಳಿಯಾಗಿಲ್ಲ? ಕಾಂಗ್ರೆಸ್‍ನವರು ಈ ವಿಚಾರದಲ್ಲಿ ರಾಜಕೀಯ ಬೆರೆಸಲು ಪ್ರಯತ್ನಿಸುತ್ತಿದ್ದಾರೆ. ಶಿವಕುಮಾರ್ ತಾವು ಭ್ರಷ್ಟಾಚಾರ ಮಾಡಿಲ್ಲವೆಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗಿದ್ದಲ್ಲಿ, ಈ ತನಿಖೆಗೆ ಹೆದರುವ ಅವಶ್ಯಕತೆ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆದು, ಸತ್ಯ ಹೊರ ಬರಲು ಎಲ್ಲರೂ ಸಹಕಾರ ನೀಡಬೇಕು,” ಎಂದರು.

“ಉಪ ಚುನಾವಣೆಗೂ ದಾಳಿಗೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಬಿಜೆಪಿ ಸರ್ಕಾರ 117 ಸ್ಥಾನದೊಂದಿಗೆ ಸ್ವಂತ ಬಲದಿಂದ ಸರ್ಕಾರ ರಚಿಸಿದೆ. ಈ ಉಪ ಚುನಾವಣೆ ಸರ್ಕಾರದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಿರುವಾಗ ಚುನಾವಣೆಗೂ ದಾಳಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

“ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದೇವೆ ಎನ್ನುವುದಾದರೆ, ಯುಪಿಎ ಸರ್ಕಾರದ ಅವಧಿಯಲ್ಲಿ, ಅಮಿತ್ ಶಾ ಅವರನ್ನು ಎರಡು ವರ್ಷ ಗುಜರಾತ್‍ನಿಂದ ಬಹಿಷ್ಕಾರ ಮಾಡಿದ್ದು, ಈಗಿನ ಆಂಧ್ರಪ್ರದೇಶದ ಸಿಎಂ ಸೇರಿ ಕಾಂಗ್ರೆಸ್ಸೇತರ ಪಕ್ಷದ ಮೇಲೆ ಸಿಬಿಐ ದಾಳಿ ನಡೆಸಿದ್ದು ರಾಜಕೀಯ ಪ್ರೇರಣೆಯೇ?” ಎಂದು ಪ್ರಶ್ನಿಸಿದರು.

- Call for authors -

LEAVE A REPLY

Please enter your comment!
Please enter your name here