ಉದ್ಧವ್‌ ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ;ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ ಡಿಸಿಎಂ

0
0

ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಾತುಗಳು ಉದ್ಧಟತನದಿಂದ ಕೂಡಿವೆ. ದೇಶದ ಏಕತೆ- ಸಮಗ್ರತೆಗೆ ಧಕ್ಕೆ ಉಂಟು ಮಾಡುವಂಥ ಇಂಥ ವ್ಯಕ್ತಿಯ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್‌ ಪಕ್ಷ ಕೂಡಲೇ ವಾಪಸ್‌ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಒತ್ತಾಯ ಮಾಡಿದರು

ಬೆಂಗಳೂರಿನ ಮಲ್ಲೇಶ್ವರದ ಗಾಂಧಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯಂಥ ಸಾಂವಿಧಾನಿಕ, ಘನತೆಯುಳ್ಳ ಪದವಿಯಲ್ಲಿದ್ದು ಅತ್ಯಂತ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿರುವ ಉದ್ಧವ್‌ ಠಾಕ್ರೆ ಮಾತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಎನ್ನುವುದು ಮುಗಿದ ಅಧ್ಯಾಯ ಎಂದರು.

ಹಳೆಯ ವಿಷಯವನ್ನು ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂಥ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂಥ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವ-ಹೆದರುವ ರಾಜ್ಯವಲ್ಲ. ನಮ್ಮ ಸಹಿಷ್ಣುತೆ, ಶಾಂತಿಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ಗಡಿ ವಿಷಯವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಶಿವಸೇನೆಯಂಥ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಡಿಸಿಎಂ ಕಿಡಿ ಕಾರಿದರು.

ಕಾಂಗ್ರೆಸ್‌ ನಾಯಕರು, ಅದರಲ್ಲೂ ಸಿದ್ದರಾಮಯ್ಯ ಅವರಂಥ ನಾಯಕರು ಉದ್ಧವ್‌ ಠಾಕ್ರೆ ಹೇಳಿಕೆಯನ್ನು ಖಂಡನೆ ಮಾಡಿರುವುದು ಸ್ವಾಗತಾರ್ಹ. ಕೂಡಲೇ ಅವರೆಲ್ಲರೂ ತಮ್ಮ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರಿ ಶಿವಸೇನೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯುವಂತೆ ಮಾಡಬೇಕು. ಆಗ ಮಾತ್ರ ಕರ್ನಾಟಕದ ಕುರಿತ ಕಾಂಗ್ರೆಸ್‌ ಪಕ್ಷದ ಬದ್ಧತೆ ಏನೆಂಬುದು ಜನರಿಗೆ ಗೊತ್ತಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ನಾವು ಭಾರತೀಯರು:

ಭಾರತ ಇವತ್ತು ಬದಲಾಗಿದೆ. ಸಂಘಟಿತವಾಗಿ ಹೊರಗಿನ ಶಕ್ತಿಗಳನ್ನು ಎದುರಿಸುತ್ತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇಂಥ ಸಂದರ್ಭದಲ್ಲಿ ಸಂಕುಚಿತ ವಿಷಯಗಳನ್ನೂ, ಅದರಲ್ಲೂ ಎಂದೋ ಮುಗಿದ ಅಧ್ಯಾಯವನ್ನು ಇಟ್ಟುಕೊಂಡು ನೆಮ್ಮದಿ ಕೆಡಿಸುವಂಥ ಕೆಲಸ ಮಾಡಬಾರದು. ಒಂದು ರಾಜ್ಯದ ಮುಖ್ಯಮಂತ್ರಿ ಪದವಿಯಲ್ಲಿ ಕೂತ ವ್ಯಕ್ತಿಗೆ ಇದು ಶೋಭೆಯಲ್ಲ ಎಂದು ಡಿಸಿಎಂ ಖಾರವಾಗಿ ಪ್ರತಿಕ್ರಿಯಿಸಿದರು.

- Call for authors -

LEAVE A REPLY

Please enter your comment!
Please enter your name here