ಬೇಬಿ ಬೆಟ್ಟದಲ್ಲಿ ನಾಲ್ಕು ತಿಂಗಳಿನಿಂದ ಗಣಿಗಾರಿಕೆ ಸ್ಥಗಿತ: ನಿರಾಣಿ

0
2

ಕಲಬುರಗಿ,ಜು.10- ಮಂಡ್ಯ ಜಿಲ್ಲೆ ಬೇಬಿಬೆಟ್ಟದಸು ತ್ತಮುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರ ಬಳಿ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ನಾವು ಸಮಗ್ರ ತನಿಖೆಗೆ ಆದೇಶ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿಯಂತೆ ಕಳೆದ ನಾಲ್ಕು ತಿಂಗಳಿನಿಂದ ಕೆಆರ್‍ಎಸ್ ಅಣೆಕಟ್ಟಿನ ಸುತ್ತಲ ಭಾಗ ಇಲ್ಲವೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದ ನಂತರ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಕೆಲವರು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದ ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದೆ ಎಂದರು.

ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದಲೇ ಅಂಥವರಿಗೆ ದಂಡ ವಿಧಿಸಿ ಯಾವುದೇ ತರಹದ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ಹಾಕಲಾಗಿದೆ. ಒಂದು ವೇಳೆ ಈಗಲೂ ಅಲ್ಲಿ ಅಕ್ರಮವಾಗಿ ಯಾವುದೇ ರೀತಿಯ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ನಡೆಯುತಿರುವುದರ ಬಗ್ಗೆ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೆ ಆರ್ ಎಸ್ ಅಣೆಕಟ್ಟು ಸುತ್ತಮುತ್ತ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕಾನೂನು ಕೈಗೊಳ್ಳಲಾಗಿದ್ದುಘಿ, ಈಗಾಗಲೇ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ ಕೊಡಲಾಗಿದೆ ಎಂದರು.
ಕಳೆದ 70 ವರ್ಷಗಳಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಹೀಗಾಗಿ ಯಾವ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇಬ್ಬರ ಬಗ್ಗೆಯೂ ಅಪಾರ ಗೌರವವಿದೆ. ಹಾದಿಬೀದಿಯಲ್ಲಿ ಜಗಳ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಇಬ್ಬರೂ ಬುದ್ದಿವಂತರು. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಅವರು ಪೂರ್ಣ ವಿರಾಮ ಹಾಕಬೇಕು. ರಾಜಕಾರಣಿಗಳು ಹಾದಿಬೀದಿಯಲ್ಲಿ ಮಾತನಾಡಬಾರದು. ಶೀಘ್ರವೇ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

- Call for authors -

LEAVE A REPLY

Please enter your comment!
Please enter your name here