ಬೆಂಗಳೂರು: ರಾಜಭವನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮುಂದಿನ ಮುಖ್ಯಮಂತ್ರಿ ನೇಮಕ ಆಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ರಾಜ್ಯಪಾಲರು ಬಿಎಸ್ವೈಗೆ ಸೂಚನೆ ನೀಡಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ಎರಡು ವರ್ಷದ ಸಾಧನೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರು. ಕಾರ್ಯಕ್ರಮದ ಬಳಿಕ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆ ಘೋಷಣೆಗೂ ಮುನ್ನ ಸಿಎಂ ಬಿಎಸ್ವೈ ತಮ್ಮ ರಾಜಕೀಯ ಪಯಣ ನೆನೆದು ಭಾವುಕರಾದರು. ಕೇಂದ್ರ ಸಚಿವರಾಗುವಂತೆ ನನಗೆ ಆಹ್ವಾನ ಬಂದಾಗ ರಾಜ್ಯದಲ್ಲಿ ಪಕ್ಷ ಕಟ್ಟುವ ಉದ್ದೇಶದಿಂದ ನಾನು ಅದನ್ನು ತಿರಸ್ಕರಿಸಿದೆ ಎಂದು ನೋವಿನಿಂದ ನುಡಿದರು.









