ಕೈ ಬಾಯಿ ಶುದ್ಧವಾಗಿರುವ ಶ್ರೀನಿವಾಸ್ ಮಾನೆಯಂತಹ ಶಾಸಕರು ಕ್ಷೇತ್ರಕ್ಕೆ ಬೇಕೋ? ಭ್ರಷ್ಟ ಶಿವರಾಜ್ ಸಜ್ಜನರ್ ಬೇಕೋ?:ಸಿದ್ದರಾಮಯ್ಯ

0
2

ಹಾವೇರಿ: ಉದಾಸಿ ಮತ್ತು ಶಿವರಾಜ್ ಸಜ್ಜನರ್ ಇಬ್ಬರೂ ಸೇರಿ ಹಾವೇರಿಯ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನುಂಗಿ ನೀರುಕುಡಿದರು. ಖಾಲಿ ಸಕ್ಕರೆ ಚೀಲಗಳನ್ನು ಬಿಡದೆ ಮಾರಾಟ ಮಾಡಿದ್ದಾರೆ. ಈಗ ಕಾರ್ಖಾನೆ ಖಾಸಗಿಯವರ ಪಾಲಾಗಿದೆ. ಇಂಥವರು ಈಗ ಬಿಜೆಪಿ ಅಭ್ಯರ್ಥಿಯಾಗಿ ನಿಮ್ಮ ಬಳಿ ಮತ ಕೇಳುತ್ತಾರೆ, ಮತ ನೀಡುತ್ತೀರೋ, ಬಿಡುತ್ತೀರೋ ಕ್ಷೇತ್ರದ ಜನರೇ ಯೋಚನೆ ಮಾಡಬೇಕು ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಲಗುಂದದಲ್ಲಿ ಪ್ರಚಾರ ಭಾಷಣ ಮಾಡುತ್ತಾ ಕೈ ಬಾಯಿ ಶುದ್ಧವಾಗಿರುವ ಶ್ರೀನಿವಾಸ್ ಮಾನೆಯಂತಹ ಶಾಸಕರು ಕ್ಷೇತ್ರಕ್ಕೆ ಬೇಕೋ? ಭ್ರಷ್ಟ ಶಿವರಾಜ್ ಸಜ್ಜನರ್ ಬೇಕೋ? ತೀರ್ಮಾನಿಸಿ ಎಂದ್ರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿರಲಿಲ್ಲ, ನಾವು ಹೆಚ್ಚು ಸ್ಥಾನ ಗೆದ್ದಿದ್ದರೂ ಕೋಮುವಾದಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಜೆಡಿಎಸ್ ಗೆ ಬೆಂಬಲ ನೀಡಿದೆವು. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಕಾಂಗ್ರೆಸ್- ಜೆಡಿಎಸ್ ನ ಹದಿನೇಳು ಶಾಸಕರನ್ನು ಖರೀದಿ ಮಾಡಿ, ಸರ್ಕಾರ ಮಾಡಿದ್ರೂ ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಕೈಕಾಲು ಹಿಡಿದು ಚುನಾವಣಾ ಪ್ರಚಾರಕ್ಕೆ ಬರುವಂತೆ ಗೋಗರೆದಿದ್ದಾರೆ. ಹಾಗಾಗಿ ಈ ಕಡೆ ಬರಬಹುದು ಎಂದ್ರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ನೀಡುತ್ತಿದ್ದ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದರು. ಬಡವರ ಹೊಟ್ಟೆ ಮೇಲೆ ಹೊಡೆಯುವಂತಾ ನೀಚ ಬುದ್ದಿ ಯಾಕೆ ಮಾಡಬೇಕು? ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ಕೊಡ್ತಿದ್ವಿ, ಈಗ ಅದು ಇದೆಯಾ? ಸಾಲಮನ್ನಾ, ಇಂದಿರಾ ಕ್ಯಾಂಟೀನ್, ಭಾಗ್ಯಜ್ಯೋತಿ, ಉಚಿತ ಮನೆಗಳು, ಶೂಭಾಗ್ಯ, ಶಾದಿಭಾಗ್ಯ, ಕೃಷಿಭಾಗ್ಯ ಇವುಗಳಲ್ಲಿ ಯಾವ ಯೋಜನೆ ಈಗಿದೆ? ಎಲ್ಲವನ್ನೂ ನಿಲ್ಲಿಸಿದ್ದಾರೆ ಎಂದ್ರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಹದಿನೈದು ಲಕ್ಷ ಮನೆ ನೀಡಿದ್ದೆ. ಹಾವೇರಿಯ ಬಡ ಜನರಿಗೆ ಬಿಜೆಪಿ ಸರ್ಕಾರ ಒಂದೇ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದೆಯಾ? ಕುರಿ, ಹಸು, ಎತ್ತುಗಳು ಸತ್ತಾಗ ಪರಿಹಾರ ನೀಡುವ ಅನುಗ್ರಹ ಯೋಜನೆ ಈಗಿಲ್ಲ, ಇದರಿಂದ ಹಿಂದುಳಿದ ವರ್ಗಗಳ ಜನ ಎಷ್ಟು ನಷ್ಟ ಅನುಭವಿಸಿದ್ದಾರೆಂದು ಸರ್ಕಾರಕ್ಕೆ ಗೊತ್ತೇ? ಇಷ್ಟೆಲ್ಲಾ ಮಾಡಿದ್ರೂ ಬಿಜೆಪಿಗೆ ಮತ ನೀಡಬೇಕಾ? ಇದೂ ಸಾಕಾಗಿಲ್ಲ ಅಂತ ಕೊಳವೆ ಬಾವಿಗೆ ಮೀಟರ್ ಹಾಕಿ ರೈತರ ಬದುಕು ಕಸಿಯಲು ಹೊರಟಿದ್ದಾರೆ ಎಂದು ಟೀಕಿಸಿದ್ರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹಸಿವಿನಿಂದ ನರಳುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 101 ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ನಮಗಿಂತ ಉತ್ತಮ ಸ್ಥಾನದಲ್ಲಿ ಇದ್ದಾವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಹಸಿವಿನ ಸೂಚ್ಯಂಕದಲ್ಲಿ ಭಾರತ 55ನೇ ಸ್ಥಾನದಲ್ಲಿ ಇತ್ತು. ಇದೇನಾ ಮೋದಿಯ ಅಚ್ಚೇದಿನ್? ರಸಗೊಬ್ಬರ, ಸಿಮೆಂಟ್, ಕಬ್ಬಿಣ, ಸಿಲಿಂಡರ್, ಪೆಟ್ರೋಲ್, ಡೀಸೆಲ್, ಆಸ್ಪತ್ರೆ ಬಿಲ್, ಅಡುಗೆ ಎಣ್ಣೆ ಬೆಲೆ ಏನಾಗಿದೆ? ಬಡವರು ಕೊಳ್ಳಲು ಸಾಧ್ಯವೇ? ಈ ಉಪ ಚುನಾವಣೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಇದು ನಿಜವೇ ಆದರೂ ಇಷ್ಟೆಲ್ಲಾ ಅನ್ಯಾಯ ಮಾಡಿರುವ ಬಿಜೆಪಿಗೆ ಬುದ್ದಿ ಕಲಿಸಬೇಕಲ್ಲವೇ? ಅದಕ್ಕಾಗಿಯಾದರೂ ನಮ್ಮ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಕೈಮುಗಿದು ಮನವಿ ಮಾಡಿದ್ರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 46 ರೂಪಾಯಿ ಇದ್ದ ಡೀಸೆಲ್ ಬೆಲೆ ಇಂದು 100 ರೂಪಾಯಿ ಆಗಿದೆ, ಪೆಟ್ರೋಲ್ ಬೆಲೆ 72 ರೂಪಾಯಿ ಇಂದ 110 ರೂಪಾಯಿ ಆಗಿದೆ, ಅಡುಗೆ ಎಣ್ಣೆ 80 ರೂಪಾಯಿ ಇತ್ತು, 200 ರೂಪಾಯಿ ಆಗಿದೆ. ಇವ್ರೆಲ್ಲಾ ಇನ್ನೂ ಅಧಿಕಾರದಲ್ಲಿ ಇರಬೇಕಾ? ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡ್ತೀವಿ. ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡ್ತೀವಿ. ಹಾಗಾಗಿ ಕಾಂಗ್ರೆಸ್ ಗೆ ಮತ ನೀಡಬೇಕು.ಗೌರಾಪುರ ಗುಡ್ಡದ 21 ಎಕರೆಯನ್ನು ಸರ್ಕಾರ ಅಗ್ಗದ ಬೆಲೆಗೆ ಶಿವರಾಜ್ ಸಜ್ಜನರ್ ಗೆ ಕೊಟ್ಟಿದೆ. ಗುಡ್ಡ ನುಂಗಲು ಹೊರಟಿರುವವರು ಸಜ್ಜನರೋ? ದುರ್ಜನರೋ? ಇಂಥವರಿಗೆ ಮತ ನೀಡುತ್ತೀರಾ ಎಂದು ಇನ್ನೊಮ್ಮೆ ಯೋಚಿಸಿ ಎಂದ್ರು.

- Call for authors -

LEAVE A REPLY

Please enter your comment!
Please enter your name here