ಬೆಂಗಳೂರು: ಬಿಜೆಪಿಗೆ ಅಖಂಡ ರಾಜ್ಯದ ಬಗ್ಗೆ ಕನಿಷ್ಠ ಕಾಳಜಿ, ಗೌರವವೂ ಇಲ್ಲ. ಇದ್ದಿದ್ದರೆ ರಾಜ್ಯದ ಭಾಗವನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳುತ್ತಿರಲಿಲ್ಲ. ಅಖಂಡ ಕರ್ನಾಟಕಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಿಂದಗಿ ಕಾಂಗ್ರೆಸ್ ಕಚೇರಿ ಬಳಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ ನಮ್ಮ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಕಾರ್ಯಾಧ್ಯಕ್ಷರು ಸೇರಿದಂತೆ ಹಲವು ನಾಯಕರು ಇಲ್ಲೇ ಇದ್ದು ಪ್ರಚಾರ ಮಾಡುತ್ತಿದ್ದಾರೆ. ಅಗತ್ಯ ಬಿದ್ದರೆ ನಾನು ಕೂಡ ಇಲ್ಲೇ ವಾಸ್ತವ್ಯ ಹೂಡಿ ಪ್ರಚಾರ ಮಾಡುತ್ತೇನೆ. ಇಲ್ಲಿನ ಮತದಾರರಲ್ಲಿ ಬಹಳ ಉತ್ಸಾಹ ಕಾಣುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಸಗೊಬ್ಬರದಿಂದ ಹಿಡಿದು ಒ್ರತಿಯೊಂದರಲ್ಲೂ ಕಾಳಸಂತೆಯದೇ ದರ್ಬಾರು. ಇದರಿಂದ ರೈತರಿಗೆ, ಅಡುಗೆ ಅನಿಲ, ಅಡುಗೆ ಎಣ್ಣೆ ಹೆಚ್ಚಳದಿಂದ ಮಹಿಳೆಯರಿಗೆ, ಉದ್ಯೋಗವಿಲ್ಲದೆ ಯುವಕರಿಗೆ ಸೇರಿದಂತೆ ಎಲ್ಲರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದ್ರು.
ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾಯುತ್ತಿರುವ ಅವಕಾಶ ಈಗ ಸಿಕ್ಕಿದೆ. ಈ ಅವಕಾಶವನ್ನು ಸಿಂದಗಿ ಹಾಗೂ ಹಾನಗಲ್ ಮತದಾರರು ಬಳಸಿಕೊಳ್ಳುತ್ತಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದ್ರು.
ಇನ್ನು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ತಮ್ಮ ಕ್ಷೇತ್ರವನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದರು. ಈಗ ಶಿವರಾಜ್ ಪಾಟೀಲ್ ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ಸಂಸ್ಕೃತಿ. ಬಿಜೆಪಿಗೆ ಅಖಂಡ ರಾಜ್ಯದ ಬಗ್ಗೆ ಕನಿಷ್ಠ ಕಾಳಜಿ, ಗೌರವವೂ ಇಲ್ಲ. ಇದ್ದಿದ್ದರೆ ರಾಜ್ಯದ ಭಾಗವನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳುತ್ತಿರಲಿಲ್ಲ. ಅಖಂಡ ಕರ್ನಾಟಕಕ್ಕೆ ಧಕ್ಕೆ ತಂದಿದ್ದಾರೆ. ನಾವು ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಶಿವರಾಜ್ ಪಾಟೀಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಶಾಸಕ ಸ್ಥಾನಕ್ಕೆ ಅವರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಅವರ ಹೇಳಿಕೆಗೆ ಬಿಜೆಪಿ ಪಕ್ಷದ ಬೆಂಬಲ ಇದೆ, ಪಕ್ಷದಲ್ಲಿ ಆಂತರಿಕವಾಗಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದೇ ಅರ್ಥ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದ್ರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆ ಅವಮಾನಕಾರಿ, ಖಂಡನೀಯ. ಇದಕ್ಕೆ ಅವರು ಕ್ಷಮೆ ಕೊರಬೇಕು ಎಂದು ಆಗ್ರಹಿಸಿದ್ರು.
ಕುಮಾರಸ್ವಾಮಿ ಅವರ ಸರಣಿ ಟ್ವೀಟ್ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿದ್ದರಾಮಯ್ಯ ಅವರ ಹಾದಿಯಾಗಿ ನಮ್ಮ ಪಕ್ಷದ ನಾಯಕರು ಯಾರನ್ನೂ ಮುಗಿಸುವುದಿಲ್ಲ. ಒಬ್ಬರು ಮತ್ತೊಬ್ಬ ನಾಯಕರನ್ನು ಬೆಳೆಸುವ ಹಾಗೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಮಾತನಾಡಿರಬೇಕು. ಅದರಲ್ಲಿ ವಾಸ್ತವಾಂಶ ಇಲ್ಲ ಎಂದ್ರು.
ಸಲೀಂ ಹಾಗೂ ಉಗ್ರಪ್ಪ ಅವರ ಸಂಭಾಷಣೆಗೆ ಸಂಬಂಧಿಸಿದಂತೆ ಸಾಕ್ಷ್ಯ ಸಿಕ್ಕರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂಬ ಸಚಿವ ಕಾರಜೋಳ ಅವರ ಹೇಳಿಕೆಗೆ ಉತ್ತರಿಸಿದ ಅವರು, ‘ಈ ವಿಚಾರದಲ್ಲಿ ಸಮಯ ವ್ಯರ್ಥ ಮಾಡುವುದೇಕೆ? ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಿ’ ಎಂದರು.








