ಕೊಡಗು, ಅ. 17: ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಅವರು ಕಣ್ತುಂಬಿಕೊಂಡರು.
ಮಕರ ಲಗ್ನದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವಾಗಿದ್ದು, ಈ ವೇಳೆ ಸಚಿವ ನಾರಾಯಣ ಗೌಡ ಅವರು ಹಾಜರಿದ್ದು, ತಾಯಿಯ ದರ್ಶನ ಪಡೆದರು. ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ಮೊದಲ ಬಾರಿಗೆ ತಾಯಿಯ ದರ್ಶನ – ಸಚಿವ ಡಾ. ನಾರಾಯಣಗೌಡ*
ಮಂಡ್ಯ ಜಿಲ್ಲೆಯ ಪರವಾಗಿ ಬಂದು ತಾಯಿಯ ದರ್ಶನ ಪಡೆದಿದ್ದೇನೆ. ತಾಯಿಯ ಪ್ರಸಾದವನ್ನು ತೆಗೆದುಕೊಂಡು ಹೋಗಿ, ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭಕ್ತರಿಗೆ ಹಂಚಲಾಗುತ್ತದೆ. ಕೋಟ್ಯಂತರ ಜನರಿಗೆ ನೀರು, ಅನ್ನವನ್ನ ನೀಡುತ್ತಿರುವ ತಾಯಿಯ ದರ್ಶನ ಮಾಡಿದ್ದೇನೆ. ಮೊದಲ ಬಾರಿಗೆ ಬಂದು ದೇವಿಯ ದರ್ಶನ ಪಡೆದಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡಿಲ್ಲ, ಆದರೆ ಎಲ್ಲರಿಗೂ ಪ್ರಸಾದ ನೀಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಗೊಂದಲ ಆಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆ. ಸರ್ವರಿಗೂ ಅಭಿನಂದನೆ ತಿಳಿಸುತ್ತೇನೆ. ದೇವಿ ಎಲ್ಲರಿಗೂ ಒಳ್ಳೇದು ಮಾಡಲಿ. ರಾಜ್ಯದಿಂದ ದೇಶದಿಂದ ಮಹಾಮಾರಿ ಕೊರೋನಾ ದೂರ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದರು.
ಕಾವೇರಿ ತೀರ್ಥೋದ್ಭವದ ತೀರ್ಥವನ್ನು ಐದು ಬಿಂದಿಗೆಯಲ್ಲಿ ತಲಕಾವೇರಿಯಿಂದ ಮಂಡ್ಯಕ್ಕೆ ತೆಗೆದುಕೊಂಡು ಬರಲಾಗುತ್ತಿದೆ. ಸಂಜೆ ಐದು ಗಂಟೆಗೆ ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ವಿತರಿಸಲಾಗುತ್ತದೆ.









