ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಹಸಿರಿನ ಮಡಿಲಿನಲ್ಲಿರುವ ಸುಂದರ ಪ್ರವಾಸಿತಾಣ. ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧವಾಗಿದೆ. ದಾಂಡೇಲಿಯು ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಸಾಹಸಮಯ ಪ್ರವಾಸಿ ತಾಣವಾಗಿದೆ.
ದಟ್ಟ ದಂಡಕಾರಣ್ಯ ಇರುವುದರಿಂದ ಈ ಊರಿಗೆ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆಯೂ ಇದೆ.
ಪ್ರವಾಸಿಗರನ್ನು ಸೆಳೆಯುವಲ್ಲಿ ಸದಾ ಮುಂದೂ
ದಾಂಡೇಲಿ ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವಾಗಿದೆ. ಇದರಿಂದಲೇ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ವನ್ಯಜೀವಿ ಧಾಮದಲ್ಲಿ ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡು ಕೋಣ, ಕರಡಿ, ನರಿ, ಜೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ತಳಿಗಳ ಪಕ್ಷಿಗಳಿಗೆ ಆಶ್ರಯ ನೀಡಿದೆ.
ಕಾಳಿ ನದಿ ಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದಾಗಿದೆ. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ, ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಬಗೆ ಬಗೆಯ ಪಕ್ಷಿ ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.
ಗೋವಾದಿಂದ 125 ಕಿ.ಮೀ. ದೂರದಲ್ಲಿರುವ ದಾಂಡೇಲಿಗೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ರಸ್ತೆ ಮೂಲಕ ಹೋಗಬಹುದಾಗಿದೆ.










