ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಇಂದಿನಿಂದ ಬೆಂಗಳೂರಲ್ಲೂ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ.
ಡೀಸೆಲ್ ದರ ಏರಿಕೆ, ವಾಹನಗಳ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಮ್ ದರ ಹೆಚ್ಚಳಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘಟನೆಗಳು ದೇಶಾದ್ಯಂತ ಅನಿರ್ದಿಷ್ಟವಾವಧಿ ಬಂದ್ ಕರೆ ನೀಡಿದ್ದವು. ದೇಶದಾದ್ಯಂತ ಸರಕು ಸಾಗಣಿಕೆ ಲಾರಿಗಳು ಸೇರಿದಂತೆ ಎಲ್ಲಾ ರೀತಿಯ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ.
ಲಾರಿ ಮಾಲೀಕರ ಬೇಡಿಕೆ ಈಡೇರಿಕೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗದ ಹಿನ್ನೆಲೆ ಲಾರಿ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಆರು ಲಕ್ಷಕ್ಕೂ ಅಧಿಕ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ತಿಳಿಸಿದರು.
ಲಾರಿ ಮಾಲೀಕರಲ್ಲಿ ಒಡಕು!
ಲಾರಿ ಮಾಲೀಕರಲ್ಲಿ ಒಡಕು ಉಂಟಾಗಿದ್ದು ಎರಡು ಗುಂಪುಗಳ ನಿರ್ಮಾಣವಾಗಿದೆ. ಷಣ್ಮುಗಪ್ಪ ಹಾಗೂ ಚನ್ನಾರೆಡ್ಡಿ ನೇತೃತ್ವದಲ್ಲಿ ಎರಡು ಬಣ ನಿರ್ಮಾಣವಾಗಿದ್ದು ಇಂದಿನ ಮುಷ್ಕರಕ್ಕೆ ಷಣ್ಮುಗಪ್ಪ ನೇತೃತ್ವದ ಬಣ ಬೆಂಬಲ ನೀಡದೆ ವಿರೋಧ ವ್ಯಕ್ತಪಡಿಸಿದೆ. ಷಣ್ಮುಗಪ್ಪ ಬಣದ ಲಾರಿ ಮಾಲೀಕರು ಮುಷ್ಕರದಲ್ಲಿ ಭಾಗವಹಿಸದ ಹಿನ್ನೆಲೆ ಅವರ ಲಾರಿಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.









