ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಅಲ್ಲಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಒಂದು ನಯಾಪೈಸೆ ನೆರವು ನೀಡಿಲ್ಲ ಎನ್ನುವ ಮೂಲಕ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ ಎಂಬ ಸುಳಿವನ್ನು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡಲು ಶೇ.50ರಷ್ಟು ನೆರವು ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ತಿರುಗೇಟು ನೀಡಿದರು, ತಮ್ಮ ಆರ್ಥಿಕ ಇತಿಮಿತಿ ಅರಿತು ರೈತರ ಸಾಲ ಮನ್ನಾ ಘೋಷಣೆ ಮಾಡಬೇಕಿತ್ತು. ಈಗಲೂ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವವರೆಗೆ ನಾವು ಕಾಯುತ್ತೇವೆ. ಅಲ್ಲಿಯವರಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಬಿಜೆಪಿಯ ಎಲ್ಲ ಪ್ರಮುಖರಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಆದ್ರೂ, ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಣಾಳಿಕೆಗಳನ್ನು ಮುಖ್ಯಮಂತ್ರಿಗಳು ಓದಬೇಕು ಎಂದರು.
ಸರ್ಕಾರ ಗೊಂದಲದ ಗೂಡಾಗಿದ್ದು ಬಜೆಟ್ ಮಂಡನೆ ವಿಚಾರದಲ್ಲೂ ಗೊಂದಲವಿದೆ. ಸಿದ್ದರಾಮಯ್ಯ ಬಜೆಟ್ ಬೇಡ ಅಂದರೆ ಡಿಸಿಎಂ ಪರಮೇಶ್ವರ್ ಬಜೆಟ್ ಮಂಡಿಸಬೇಕು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.









