ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ನಾಲ್ಕು ಆರೋಪಿಗಳಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದ್ದು, ಈ ಸಂಬಂಧ ಅಧೀನ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸಲು ಹೈಕೋರ್ಟ್ ಮುಂದಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತಮಗೆ ದೈಹಿಕ ಹಿಂಸೆ ನೀಡುತ್ತಿದ್ದು, ಈ ಕುರಿತು ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು. ಆರೋಪಿಗಳಿಗೆ ದೈಹಿಕ ಹಿಂಸೆ ನೀಡಿದ್ದಾರೆ ಎಂಬ ಆರೋಪ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿರುವ 1ನೇ ಎಸಿಎಂಎಂ ಹಾಗೂ 3ನೇ ಎಸಿಎಂಎಂ ನ್ಯಾಯಾಲಯಗಳ ಗಮನಕ್ಕೆ ತರಲಾಗಿದೆ. ಹೀಗಿದ್ದರೂ ಅಧೀನ ನ್ಯಾಯಾಲಯಗಳು ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಆದೇಶಿಸಲಿಲ್ಲ ಎಂದು ಅರ್ಜಿದಾರರ ಪರ ವಕೀಲ ಅಮೃತೇಶ್ ದೂರಿದರು.
ಸರ್ಕಾರಿ ಅಭಿಯೋಜಕ ರಾಚಯ್ಯ ವಾದ ಮಂಡಿಸಿ, ತನಿಖೆಯ ವೇಳೆ ಪೊಲೀಸರು ಅರ್ಜಿದಾರರಿಗೆ ಯಾವುದೇ ರೀತಿಯ ದೈಹಿಕ ಹಿಂಸೆ ನೀಡಿಲ್ಲ. ಹಲವು ಬಾರಿ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಮ್ಮೆಯೂ ಅವರು ಪೊಲೀಸರು ತಮಗೆ ಚಿತ್ರಹಿಂಸೆ ನೀಡಿರುವ ಕುರಿತು ನ್ಯಾಯಾಧೀಶರಿಗೆ ತಿಳಿಸಿಲ್ಲ. ಆರೋಪಿಗಳ ಪರ ವಕೀಲರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರಮಾಣ ಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ಅಧೀನ ನ್ಯಾಯಾಲಯಗಳಿಂದ ದಾಖಲೆ ತರಿಸಿಕೊಂಡು ಪರಿಶೀಲನೆ ನಡೆಸುವ ಅಗತ್ಯವಿದೆ. ಹೀಗಾಗಿ, ಪ್ರಮಾಣಪತ್ರದ ಪ್ರತಿಯನ್ನು 1ನೇ ಎಸಿಎಂಎಂ ಹಾಗೂ 3ನೇ ಎಸಿಎಂಎಂ ನ್ಯಾಯಾಲಯಗಳಿಗೆ ಕಳುಹಿಸಬೇಕು. ಪ್ರಮಾಣಪತ್ರದಲ್ಲಿ ಮಾಡಲಾಗಿರುವ ಆರೋಪಗಳ ಸಂಬಂಧ 1ನೇ ಎಸಿಎಂಎಂ ಮತ್ತು 3ನೇ ಎಸಿಎಎಂ ನ್ಯಾಯಾಲಯಗಳು 10 ದಿನಗಳ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.









