ಬೆಂಗಳೂರು ಬಸ್ ಪ್ರಯಾಣದರ ಹೆಚ್ಚಳಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ.
ಹೌದು,ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.15-20 ರಷ್ಟು ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಬಿಎಂಟಿಸಿ ಅಧ್ಯಕ್ಷ ವಿ.ಪೊನ್ನುರಾಜ್ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮ್ಮತಿ ನೀಡಲು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಿರಾಕರಿಸಿದ್ದಾರೆ. ಸಧ್ಯದ ಮಟ್ಟಿಗೆ ಬಸ್ ಪ್ರಯಾಣದರ ಎರಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ರಚನೆಯಾಗಿ ತಿಂಗಳು ಕೂಡ ಕಳೆದಿಲ್ಲ,ಇಷ್ಟು ಬೇಗ ಬಸ್ ಪ್ರಯಾಣದರ ಹೆಚ್ಚಿಸಿದರೆ ಅದು ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.ಸರ್ಕಾರ ಜನ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಲಿದೆ ಎನ್ನುವ ಕಾರಣಕ್ಕೆ ಬಸ್ ಪ್ರಯಾಣದರ ಹೆಚ್ಚಳಕ್ಕೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರೆಡ್ ಸಿಗ್ನಲ್ ನೀಡಿದ್ದಾರೆ.
ಈ ಹಿಂದೆಯೂ ಬಿಎಂಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಆದರೆ ಚುನಾವಣಾ ವರ್ಷ ಎನ್ನುವ ಕಾರಣಕ್ಕೆ ಅಂದಿನ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡಿರಲಿಲ್ಲ.ಈಗ ಎರಡನೇ ಬಾರಿ ಸಲ್ಲಿಸಿದ್ದ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ.
ಸತತವಾಗಿ ಡೀಸೆಲ್ ದರದಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಸಿಬ್ಬಂದಿ ವೇತನ ಹೆಚ್ಚಳದಿಂದಾಗಿ ಬಿಎಂಟಿಸಿ ಬೊಕ್ಕಸಕ್ಕೆ ಕೊಟ್ಯಾಂತರ ರೂ.ಗಳ ಆರ್ಥಿಕ ಹೊರೆ ಹೆಚ್ಚಾಗಿದೆ.ಹೀಗಾಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ಕೋರಲಾಗಿತ್ತು.
ಕೆಎಸ್ಆರ್‌ಟಿಸಿ ದರವೂ ಏರಿಕೆ ಇಲ್ಲ:
ಬಿಎಂಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಕೆಎಸ್ಆರ್‌ಟಿಸಿ, ಈಶಾನ್ಯ ಸಾರಿಗೆ,ವಾಯುವ್ಯ ಸಾರಿಗೆ ನಿಗಮಗಳು ಸಿದ್ದತೆ ಮಾಡಿಕೊಂಡಿದ್ದವು,ಆದರೆ ಬಿ ಎಂ ಟಿ ಸಿ ಪ್ರಸ್ತಾವನೆ ತಿರಸ್ಕಾರಗೊಂಡ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಸಧ್ಯಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡದಿರಲು ನಿರ್ಧರಿಸಿವೆ.









