ನಮ್ಮ ಕುಟುಂಬ ಯೋಗಪ್ರಿಯ ಕುಟುಂಬ: ಕುಮಾರಸ್ವಾಮಿ

0
34

ಬೆಂಗಳೂರು:ಯೋಗ ಎನ್ನುವುದು ನನಗೆ ಪ್ರಿಯಯಾದ ಸಂಗತಿಗಳಲ್ಲೊಂದು,ನನ್ನ ಕುಟುಂಬ ಮೊದಲಿನಿಂದಲೂ ಯೋಗಾಭ್ಯಾಸ ನಡೆಸುತ್ತಾ ಬಂದಿದೆ. ನನ್ನ ತಂದೆ ಹಾಗೂ ನನ್ನ ಪತ್ನಿ ಸಹಾ ಯೋಗಪ್ರಿಯರು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶುಭಾಷಯಗಳೊಂದಿಗೆ ಜನತೆಗೆ ಯೋಗದ ಮಹತ್ವವನ್ನೊಳಗೊಂಡ ಸಂದೇಶವನ್ನು ಸಾರಿದ್ದಾರೆ.ಸ್ವಾಮಿ ವಿವೇಕಾನಂದರು ‘ಅಭ್ಯಾಸದಿಂದ ಯೋಗ ಸಾಧ್ಯ. ಯೋಗದಿಂದ ಜ್ಞಾನ, ಜ್ಞಾನದಿಂದ ಪ್ರೀತಿ, ಪ್ರೀತಿಯಿಂದ ಸಂತೋಷ ಪ್ರಾಪ್ತವಾಗುತ್ತದೆ’ ಎಂದಿದ್ದರು. ಅಂತಹ ಸಂತೋಷವನ್ನು ಪಡೆಯಲು ಯೋಗ ಅಗತ್ಯವಾಗಿದೆ ಎಂದು ಸಂದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ ಮಾಡಿ ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿಟ್ಟುಕೊಳ್ಳಲು, ಶಾಂತ ಮನಸ್ಸನ್ನು ಹೊಂದಲು ಯೋಗ ಅಗತ್ಯ.ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಸಹಾ ಗುರುತಿಸಿ ಅದನ್ನು ಪ್ರಚುರಪಡಿಸಲೆಂದೇ ‘ವಿಶ್ವ ಯೋಗ ದಿನಾಚರಣೆಯನ್ನು’ ಆಚರಿಸುವ ವ್ಯವಸ್ಥೆ ಮಾಡಿತು. 2015ರಿಂದ ಆರಂಭವಾದ ಈ ದಿನಾಚರಣೆ ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿ ತುಂಬಿದೆ. ಅಷ್ಟೇ ಅಲ್ಲ ಭಾರತದ ಯೋಗ ಪರಂಪರೆಯ ಹಿರಿಮೆಯ ಬಗ್ಗೆಯೂ ಕಣ್ಣೋಟ ನೀಡಿದೆ.

ಯೋಗದ ಮಹತ್ವವನ್ನು ಜಗತ್ತಿಗೆ ಅರಿವು ಮಾಡಿಸುವ ಉದ್ಧೇಶದಿಂದ ಮೈಸೂರಿನಲ್ಲಿ ಪ್ರತೀ ವರ್ಷ ಯೋಗದಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಈ ವರ್ಷವೂ ಸಂಘ ಸಂಸ್ಥೆಗಳು ಒಗ್ಗೂಡಿ ಗಿನ್ನೆಸ್ ದಾಖಲೆ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ,ಯೋಗ ದಿನಾಚರಣೆಯ ದಿನ ಮಾತ್ರವಲ್ಲದೆ ಪ್ರತೀ ದಿನ ಯೋಗಕ್ಕೆ ನಿಮ್ಮನ್ನು ಅರ್ಪಿಸಿಕೊಳ್ಳಿ ಎಂದು ಆಶಿಸುತ್ತೇನೆ ಎಂದು ಸಂದೇಶ ಪತ್ರದ ಮೂಲಕ ತಿಳಿಸಿದ್ದಾರೆ.

- Call for authors -

LEAVE A REPLY

Please enter your comment!
Please enter your name here