ಬೆಂಗಳೂರು: ಇಂದು ವಿಶ್ವ ಯೋಗ ದಿನ. ನಾಲ್ಕನೇ ವಿಶ್ವ ಯೋಗ ದಿನಾಚರಣೆಯನ್ನ ಬಿಜೆಪಿ ಪಕ್ಷದ ವತಿಯಿಂದಲೂ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ಯೋಗಾಸನ ಮಾಡಿ ಗಮನ ಸೆಳೆದರು.
ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಮಂಜುಳಾ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಯುವ ಪಡೆಯೊಂದಿಗೆ ಬಿಜೆಪಿ ಮುಖಂಡರು ಸೂರ್ಯ ನಮಸ್ಕಾರ, ಪ್ರಾಣಯಾಮ ಸೇರಿದಂತೆ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು. ಅದ್ರಲ್ಲೂ ಬಿಎಸ್ವೈ ಇಳಿ ವಯಸ್ಸಿನಲ್ಲೂ ಯುವ ಸಮೂಹದೊಂದಿಗೆ ಯೋಗದಲ್ಲಿ ತೊಡಗಿಕೊಂಡು ಗಮನ ಸೆಳೆದರು.
ಯೋಗ ಪ್ರದರ್ಶನದ ನಂತರ ವೇದಿಕೆಯಲ್ಲಿ ಮಾತನಾಡಿದ ಯಡಿಯೂರಪ್ಪ, ದೇಹ ದೇವಾಲಯವಿದ್ದಂತೆ ಅದನ್ನು ಶುದ್ದಿಯಾಗಿಟ್ಟುಕೊಳ್ಳಯವುದೇ ಯೋಗ. ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ, ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೊಷಿಸಿದೆ. ಇದರ ಯಶಸ್ಸು ಮೋದಿಗೆ ಸಲ್ಲಬೇಕು. ಯೋಗ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ. ದೈಹಿಕ ಮಾನಸಿಕ ಸದೃಡೆತೆ ಬೆಳೆಸಿಕೊಳ್ಳಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು ಯೋಗ ದಿನಕ್ಕೆ ಯೋಗಾಸನ ಮಾಡುವುದು ಸೀಮಿತವಾಗದು. ಯೋಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿದರು.









