ಮಡಿಕೇರಿ: ನೆರೆ ಪ್ರವಾಹದಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರ, ವಾಸ್ತವ್ಯದ ವ್ಯವಸ್ಥೆ, ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದ್ದು, ಪರಿಹಾರ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಆಯಾ ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ನಿರಂತರವಾಗಿ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕು ಹೆಚ್ಚಿನ ಹಾನಿ ಅನುಭವಿಸಿದೆ. ಇದರಿಂದಾಗಿ ಸಂತ್ರಸ್ತರಾದವರಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಪರಿಹಾರ ಸಾಮಗ್ರಿಗಳ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಎಲ್ಲ ಜಿಲ್ಲಾಡಳಿತಗಳು ಪರಿಹಾರ ಸಾಮಗ್ರಿಗಳನ್ನು ಪಡೆಯಲು ಆಯಾ ಜಿಲ್ಲೆಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಂಡಿದ್ದು, ಇದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲೆಗೆ ರವಾನಿಸುವ ಕಾರ್ಯವನ್ನು ಮಾಡಿರುವುದು, ಕನ್ನಡಿಗರ ಒಗ್ಗಟ್ಟಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
ಗ್ರಾಮ ಪಂಚಾಯತಿಗಳ ಮೂಲಕ ಪೂರೈಕೆ :
ಭಾರಿ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯಲ್ಲಿ ಒಟ್ಟು 51 ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅತಿ ಹೆಚ್ಚು ಹಾನಿ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ್ದು, ಇಲ್ಲಿನ ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ ಐಕೊಳ, ಮಡಿಕೇರಿ ನಗರ ಸೇರಿ ವಿವಿಧೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದೇ ರೀತಿ ಸೋಮವಾರ ಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿಯೂ ಪರಿಹಾರ ಮತ್ತು ಪುನರ್ವಸತಿ ಕೇಂದ್ರವನ್ನು ತೆರೆದು, ಸಂತ್ರಸ್ತರಿಗೆ ಊಟೋಪಹಾರ, ವಾಸ್ತವ್ಯ, ಆರೋಗ್ಯ ತಪಾಸಣೆ, ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮದ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನೂ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲೆಡೆಯಿಂದ ಸ್ವೀಕರಿಸಲಾಗುತ್ತಿರುವ ನೆರವಿನ ಸಾಮಗ್ರಿಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಕೂಡ ಸಮರ್ಪಕವಾಗಿ ವಿತರಿಸಲು ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ದಾಸ್ತಾನು ಕೇಂದ್ರಗಳಿಂದ ನೆರವು ಸಾಮಗ್ರಿಯನ್ನು ಪಡೆದು ಗ್ರಾಮ ಪಂಚಾಯತಿಗಳ ಮೂಲಕ ಪೂರೈಸಲು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಿಡಿಒ ಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಸಿಬ್ಬಂದಿಗಳು ದಾಸ್ತಾನು ಕೇಂದ್ರಗಳಲ್ಲಿ ಸಾಮಗ್ರಿಗಳ ಬೇಡಿಕೆ ಪಟ್ಟಿಯಂತೆ ಸಾಮಗ್ರಿಗಳನ್ನು ಪಡೆದು, ವಾಹನದ ವಿವರದೊಂದಿಗೆ ರಜಿಸ್ಟರ್‍ನಲ್ಲಿ ನಮೂದಿಸಿ, ಸಹಿ ಮಾಡಿ ಪಡೆದುಕೊಂಡು ಹೋಗುತ್ತಿದ್ದಾರೆ. ಈ ರೀತಿ ಪಡೆದ ಸಾಮಗ್ರಿಗಳನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನಿಜವಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ. ಸೋಮವಾರದಂದು ಸುಮಾರು 25 ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಪೂರೈಕೆ ಮಾಡಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ಮಂಗಳವಾರದಂದು ಜಿಲ್ಲಾಡಳಿತ ಭವನದ ದಾಸ್ತಾನು ಕೇಂದ್ರಕ್ಕೆ ಖುದ್ದು ಭೇಟಿ ನೀಡಿ, ದಾಸ್ತಾನು ಸ್ವೀಕಾರ ಹಾಗೂ ವಿತರಣೆ ಕಾರ್ಯವನ್ನು ಪರಿಶೀಲಿಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಹರಿದುಬರುತ್ತಿರುವ ನೆರವಿನ ಮಹಾಪೂರ :
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾದ ಸಂತ್ರಸ್ತರಿಗೆ ಸಹಾಯದ ಹಸ್ತ ಚಾಚಿರುವ ಕರ್ನಾಟಕ ರಾಜ್ಯದ ಜನತೆ, ನಿಶ್ಕಲ್ಮಶ ಮನಸ್ಸಿನಿಂದ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ರಾಜ್ಯದೆಲ್ಲೆಡೆಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿವಿಧ ಬಗೆಯ ವಾಹನಗಳು ಕೊಡಗು ಜಿಲ್ಲೆಯತ್ತ ಧಾವಿಸುತ್ತಿವೆ. ಪರಿಹಾರ ಸಾಮಗ್ರಿ ದಾಸ್ತಾನು ಕೇಂದ್ರಗಳಲ್ಲಿ ಈವರೆಗೆ ಅತಿ ಹೆಚ್ಚು ಸ್ವೀಕೃತವಾಗಿರುವ ಸಾಮಗ್ರಿಗಳೆಂದರೆ ಹಾಲು (ಬಹುದಿನ ಬಾಳಿಕೆ ಬರುವ), ಅಕ್ಕಿ, ಬಿಸ್ಸೆಟ್, ಬ್ರೆಡ್, ಬನ್, ರಸ್ಕ್ ಇವು ಹೆಚ್ಚು, ಹೆಚ್ಚು ಪೂರೈಕೆಯಾಗಿದೆ. ಇದಲ್ಲದೆ, ಬ್ಲಾಂಕೆಟ್ಸ್, ಬೆಡ್‍ಶೀಟ್ಸ್, ಸ್ಯಾನಿಟರಿ ನ್ಯಾಪ್‍ಕಿನ್ಸ್, ಟೂತ್ ಬ್ರಶ್, ಟೂತ್ ಪೇಸ್ಟ್, ಸೋಪು, ಕ್ಯಾಂಡೆಲ್ಸ್, ಮ್ಯಾಚ್‍ಬಾಕ್ಸ್, ಟವೆಲ್ಸ್, ನೀರಿನ ಬಾಟಲ್, ಹ್ಯಾಂಡ್ ಗ್ಲೌಸ್, ಶೂಗಳು, ಅಕ್ಕಿ, ಗೋಧಿ, ಸಕ್ಕರೆ, ಫ್ರೂಟ್ ಜ್ಯೂಸ್ ಟೆಟ್ರಾ ಪ್ಯಾಕ್, ಹಣ್ಣುಗಳು, ಉಡುಪುಗಳು, ಚಾಪೆಗಳು ಸೇರಿದಂತೆ ಹಲವಾರು ಬಗೆಯ ಸಾಮಗ್ರಿಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಸಂತ್ರಸ್ತರಿಗಾಗಿ ನೆರವು ನೀಡಬಯಸುವವರು ಇತರೆ ಸಂಘ ಸಂಸ್ಥೆಗಳಿಗೆ ನೀಡುವುದರ ಬದಲಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ ದಾಸ್ತಾನು ಕೇಂದ್ರಗಳಿಗೆ ನೀಡುವುದು ಸೂಕ್ತ. ಅಂತಹವರು ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮಲ್ಲೇಶ್- 9743168840, ಶ್ರೀಷಾ- 9972995353. ಬಸವರಾಜು- 8105204059 ಇವರನ್ನು ಸಂಪರ್ಕಿಸಬಹುದು.
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ :
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ ಸ್ವೀಕೃತವಾಗುತ್ತಿರುವ ಸಾಮಗ್ರಿಗಳನ್ನು ಮಡಿಕೇರಿ ತಾಲೂಕಿನಲ್ಲಿ ಮಡಿಕೇರಿಯ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನೂತನ ಕಟ್ಟಡ, ಹಾಗೂ ಎಪಿಎಂಸಿ ಗೋದಾಮು, ಕುಶಾಲನಗರದ ಎಪಿಎಂಸಿ ಗೋದಾಮು ಹಾಗೂ ವಿರಾಜಪೇಟೆಯಲ್ಲಿಯೂ ದಾಸ್ತಾನು ಮಾಡಲಾಗುತ್ತಿದೆ. ಸಾಕಷ್ಟು ಪರಿಹಾರ ಸಾಮಗ್ರಿಗಳು ದಾಸ್ತಾನು ಇದ್ದರೂ, ಕೆಲವು ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಪರಿಹಾರ ಸಾಮಗ್ರಿಗಳು ಸಕಾಲದಲ್ಲಿ ಹಾಗೂ ಅವಶ್ಯಕತೆಗೆ ತಕ್ಕಂತೆ ದೊರೆಯುತ್ತಿಲ್ಲವೆಂದು ಮತ್ತು ಪುನರ್ವಸತಿ ಕೇಂದ್ರಗಳಿಗೆ ವಿತರಿಸಲಾಗುತ್ತಿರುವ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ದಾಸ್ತಾನು ಕೇಂದ್ರಗಳಿಗೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಗಳು ದಾಸ್ತಾನು ಕೇಂದ್ರದಲ್ಲಿ ಸ್ವೀಕರಿಸಲಾಗುವ ಸಾಮಗ್ರಿಗಳ ಮಾಹಿತಿಯನ್ನು ರಜಿಸ್ಟರ್‍ನಲ್ಲಿ ದಾಖಲಿಸಿ, ಪರಿಹಾರ ಕೇಂದ್ರಗಳಿಗೆ ಸಾಮಗ್ರಿಗಳನ್ನು ವಿತರಿಸುವಾಗ ಕಡ್ಡಾಯವಾಗಿ ಸಾಮಗ್ರಿ ಪಡೆದುಕೊಂಡವರ ಸಹಿ, ಹೆಸರು, ವಿಳಾಸ, ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ವಿತರಿಸಿದ ಸಾಮಗ್ರಿಗಳ ವಿವರ ಹಾಗೂ ಪ್ರಮಾಣವನ್ನು ಸ್ಪಷ್ಟವಾಗಿ ದಾಖಲಿಸಬೇಕು. ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯವನ್ನು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.









