ಮಂಡ್ಯದ ಗಂಡು ಇನ್ನಿಲ್ಲ,ಜೀವನ ಯಾತ್ರೆ ಮುಗಿಸಿದ ಜಲೀಲ!

0
46

ಬೆಂಗಳೂರು: ಆರೋಗ್ಯ ದಿಡೀರ್ ಕುಸಿತಗೊಂಡು ಚಿತ್ರರಂಗದ ಹಿರಿಯ ನಟ, ಮಾಜಿ‌ಸಚಿವ ಅಂಬರೀಶ್ (66) ಅಕಾಲಿಕ ನಿಧನಕ್ಕಿಡಾಗಿದ್ದಾರೆ.

ಸಂಜೆ ಮನೆಯಲ್ಲಿ ಕುಸಿದು ಬಿದ್ದ ಅಂಬರೀಶ್ ರನ್ನು ಕುಟುಂಬದ ಸದಸ್ಯರು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಾಗಲೇ ಉಸುರಾಟದ ಸಮಸ್ಯೆ ಮತ್ತು ಕಿಡ್ನಿ‌ ತೊಂದರೆಯಿಂದ ಬಳಲುತ್ತಿದ್ದ ಅಂಬರೀಶ್ ಅವರಿಗೆ ವಿಕ್ರಂ ಆಸ್ಪತ್ರೆಯ ಡಾ.ಸತೀಶ್ ಅವರ ತಂಡ ಚಿಕಿತ್ಸೆ ನೀಡಲು ಸತತ ಪ್ರಯತ್ನ‌ ನಡೆಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಬರೀಶ್ ರಾತ್ರಿ 9.30ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಕೆ.ಜೆ.ಜಾರ್ಜ್, ಮಂಡ್ಯದ ಸಂಸದ ಎಲ್‌. ಆರ್.ಶಿವರಾಮೇಗೌಡ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದರು.‌ನಗರ ಪೊಲೀಸ್ ಆಯುಕ್ತರಾದ ಸಿನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬಿಗಿ ಬಂದೋಬಸ್ತ್ ಕೈಗೊಂಡರು.

ಇಂದು ಮಂಡ್ಯ ಬಳಿ ಖಾಸಗಿ ಬಸ್ ನಾಲೆಗೆ ಉರುಳಿ ಬಿದ್ದು 28ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯ ಬಗ್ಗೆ ಅಂಬರೀಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಮ್ಮ ದುಖಃ ತೋಡಿಕೊಂಡಿದ್ದರು.

ಅಂಬರೀಶ್ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯಾಗಿದ್ದರು.‌ ಕಳೆದ ನಾಲ್ಕು ವರ್ಷಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಗಂಭೀರ ಸ್ಥಿತಿ ತಲುಪಿದ್ದ ಅಂಬರೀಶ್ ಅವರ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಕಳೆದ ವಿಧಾನ ಸಭೆ ಚುನಾವಣೆಯಿಂದ ರಾಜಕೀಯವಾಗಿ ತಟಸ್ಥವಾಗಿ ಉಳಿದಿದ್ದರು. ಇತ್ತೀಚೆಗೆ ಅಂಬಿ ನಿಂಗೆ ವಯಸ್ಸಾತೋ ಚಿತ್ರದಲ್ಲೂ ನಟಿಸಿದ್ದರು. ಅದೇ ಅವರ ಕೊನೆಯ ಚಿತ್ರವಾದಂತಾಗಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್ ಮತ್ತು‌ ಅಂಬರೀಶ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಜಲೀಲನಾಗಿ ಪರಿಚಿತರಾಗಿ ನೂರಾರು ಚಿತ್ರದಲ್ಲಿ ನಟಿಸಿದ್ದರು.

ರಾಜಕೀಯ ಪ್ರವೇಶಿಸಿ ಶಾಸಕರಾಗಿ‌ ಸಂಸರಾಗಿ, ಕೇಂದ್ರ ಸಚಿವರಾಗಿ, ರಾಜ್ಯ ಸರ್ಕಾರದ ಸಚಿವರಾಗಿ ಕೆಲಸ ಮಾಡಿದ್ದ ಅವರು ಎಂದಿಗೂ ಖುರ್ಚಿಗೆ ಅಂಟಿಕೊಂಡವರಲ್ಲ. ಕಾವೇರಿ ವಿವಾದ ಹೆಚ್ಚಾದ ಸಂದರ್ಭದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದರು.‌ ಸಿದ್ದರಾಮಯ್ಯ ಅವರು ಸಂಪುಟ ಪುನರ್ರಚನೆ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಾಗಲೂ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಸಿದ್ದರಾಮಯ್ಯ ಅವರನ್ನು ಮನೆಗೆ ಊಟಕ್ಕೆ ಕರೆದು ಔತಣ ನೀಡಿ ಸ್ನೇಹಪರತೆ ಮೇರೆದಿದ್ದರು. ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಇದ್ದರೂ ತಮ್ಮಷ್ಟಕ್ಕೆ ತಾವೇ ಹಿಂದೆ ಸರಿದಿದ್ದರು.
ಚಿತ್ರರಂಗದ ಕೊಡುಗೈ ಕರ್ಣ, ನೇರ ಮಾತಿನ ಅಂಬಿಯಣ್ಣ ಇನ್ನಿಲ್ಲವಾಗಿದ್ದಾರೆ.

ಚಿತ್ರರಂಗದ ಯಜಮಾನರಾಗಿದ್ದ ಅಂಬರೀಶ್ ಯಾವುದೇ ಸಮಸ್ಯೆ ಎದುರಾದರು ಮಧ್ಯ ಪ್ರವೇಶಿಸಿ ಬಗೆ ಹರಿಸುತ್ತಿದ್ದರು. ಇತ್ತಿಚೆಗೆ ಬಹುಭಾಷ ನಟ ಅರ್ಜುನ್ ಸರ್ಜಾರ ವಿರುದ್ಧ ನಟಿ ಶೃತಿ ಹರಿಹರನ್ ಮೀ ಟೂ ಆರೋಪ ಮಾಡಿದಾಗ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಲು ಅಂಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.

ಅಂಬರೀಶ್ ನಿಧನದ ಸುದ್ದಿ ಕಾಡ್ಚಿನಂತೆ ಹರಡಿ ಅಭಿಮಾನಿಗಳು ವಿಕ್ರಮ್ ಆಸ್ಪತ್ರೆಯೆದುರು ರಾತ್ರೋರಾತ್ರಿ ಜಮಾಯಿಸಿದರು. ಅಭಿಮಾನಿಗಳ ಆಕ್ರಂದನ‌ ಮುಗಿಲು ಮುಟ್ಟಿತ್ತು.

- Call for authors -

LEAVE A REPLY

Please enter your comment!
Please enter your name here