ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಬಡ್ತಿ ಸಂಬಂಧ, ಸರಕಾರದ ತಂದಿರುವ ಕಾಯಿದೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸುವಂತೆ ಅಥವಾ ಶೀಘ್ರವೇ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್‌ಗೆ ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಸಭೆ ನಂತ್ರ ಮಾತನಾಡಿದ ಡಿಸಿಎಂ, ಪರಿಶಿಷ್ಟ ಜಾತಿ ಅವರಿಗೆ ಎಂದೂ ಮೋಸವಾಗದ ರೀತಿ ನಮ್ಮ ಸರಕಾರ ನೋಡಿಕೊಳ್ಳಲಿದೆ. ಬಡ್ತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಆ.೧೪ಕ್ಕೆ ವಿಚಾರಣೆ ಬರಲಿದೆ. ಅಲ್ಲಿವರೆಗೂ ಕಾಯಲು ಸಾಧ್ಯವಿಲ್ಲ.ಅದಕ್ಕಾಗಿ ಹಿಂದಿನ ಸರಕಾರದಲ್ಲಿ ತಂದ ಕಾಯಿದೆಯನ್ನು ಅನುಷ್ಠಾನ ಮಾಡಲು ಸುಪ್ರೀಂಕೋರ್ಟ್‌ಗೆ ಒಂದೆರಡು ದಿನದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ. ಇಲ್ಲದಿದ್ದರೆ ಕನಿಷ್ಠ ಈ ಪ್ರಕರಣದ ತೀರ್ಪನ್ನು ಶೀಘ್ರವಾಗಿ ನೀಡುವಂತೆ ಕೇಳಿಕೊಳ್ಳಲಾಗುವುದು ಎಂದರು.
ಅರ್ಜಿ ಸಲ್ಲಿಕೆ ವಿಚಾರದ ಬಗ್ಗೆ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.ಕೆಲವರಿಗೆ ಹಿಂಬಡ್ತಿಯಾಗಿದೆ. ಯಾವ ಇಲಾಖೆಯಲ್ಲೂ ಹಿಂಬಡ್ತಿ ಹಾಗೂ ಮುಂಬಡ್ತಿ ನೀಡದಂತೆ ಮುಖ್ಯಮಂತ್ರಿಗಳು ಮತ್ತೊಮ್ಮೆ ಆದೇಶ ನೀಡಿದರೆ ಸಮಸ್ಯೆ ತೀವ್ರತೆ ಕಡಿಮೆ ಆಗಲಿದೆ.ಹಿಂಬಡ್ತಿ ಮುಂಬಡ್ತಿ ಗೊಂದಲದಲ್ಲಿ ಸಾಕಷ್ಟು ಅಧಿಕಾರಿಗಳಿಗೆ ಮೂರು ನಾಲ್ಕು ತಿಂಗಳಿಂದ ವೇತನ ನೀಡದೇ ಇರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವೇತನ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಶಿಕ್ಷಣ ಸಚಿವ ಎನ್. ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಕಾನೂನು ಕಾರ್ಯದರ್ಶಿ ಶ್ರೀನಿವಾಸ, ಸಮಾಜ ಕಲ್ಯಾಣ ಇ ಲಾಖೆ ಅ ಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ , ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.









