ಬೆಂಗಳೂರು:ದಂಗೆ ಏಳುವಂತೆ ಕರೆ ನೀಡುವ ಹೇಳಿಕೆ ಖಂಡಿಸಿ ಸಿಎಂ ವಿರುದ್ಧ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಿದ ಬಿಜೆಪಿ ಅಂತಿಮವಾಗಿ ರಾಜ್ಯಪಾಲರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ,ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್,ಸಂಸದೆ ಶೋಭಾಕರಂದ್ಲಾಜೆ ನೇತೃತ್ವದ ನಿಯೋಗದಿಂದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಲಾಯ್ತು.ರಾಜ್ಯದಲ್ಲಿ ದಂಗೆ ಎಬ್ಬಿಸಲು ಪ್ರಚೋದನೆ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ವಜಾ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಕೆ ಮಾಡಿತು.ನಿನ್ನೆ ಹಾಸನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಾಗೂ ಬೆಂಗಳೂರಿನಲ್ಲಿ ಯಡಿಯೂರಪ್ಪ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ದೃಷ್ಯಗಳನ್ನು ಒಳಗೊಂಡ ಸಿಡಿಗಳನ್ನು ಪೂರಕ ಸಾಕ್ಷಿಯಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ನಿಯೋಗದ ಮನವಿ ಆಲಿಸಿದ ರಾಜ್ಯಪಾಲರು ನಾನು ನಿನ್ನೆಯಿಂದಲೂ ಎಲ್ಲವನ್ನೂ ಗಮನಿಸುತ್ತಿದ್ದೇನೆ.ಇವತ್ತು ಪತ್ರಿಕೆಗಳಲ್ಲಿ ಬಂದಿರುವ ವಿಚಾರವನ್ನೂ ಗಮನಿಸುತ್ತಿದ್ದೇನೆ. ಎಲ್ಲವೂ ನನ್ನ ಗಮನದಲ್ಲಿದೆ.ಈ ಬಗ್ಗೆ ನಾನು ಕಾನೂನು ಅಭಿಪ್ರಾಯ ಪಡೆಯುತ್ತೇನೆ ಎಂದು ರಾಜಭವನದಲ್ಲಿ ರಾಜ್ಯ ಬಿಜೆಪಿ ನಿಯೋಗಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಡಿ.ವಿ.ಸದಾನಂದಗೌಡ,ದಂಗೆಯನ್ನು ಹತೋಟಿಗೆ ತರಬೇಕಾದ ಮುಖ್ಯಮಂತ್ರಿಯೇ ತಾನೇ ದಂಗೆ ಏಳುವಂತೆ ಜನರನ್ನು ಪ್ರಚೋದಿಸಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಸಂವಿಧಾನದ ಎಲ್ಲ ವಿಧಿಗಳ ಉಲ್ಲಂಘನೆ. ಹಾಗಾಗಿಯೇ ನಾವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೆವು. ರಾಜ್ಯಪಾಲರು ತಕ್ಷಣ ಅವರ ಮೇಲೆ ಸಂವಿಧಾನಬದ್ದವಾದ ಕಾರ್ಯಾಚರಣೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದ್ರು.
ನಂತರ ಮಾತನಾಡಿದ ಆರ್.ಅಶೋಕ್, ಮೈತ್ರಿ ಸರ್ಕಾರ ಗಟ್ಟಿ ಇರೋದಾದ್ರೆ ಕಾಂಗ್ರೆಸ್ ಜೆಡಿಎಸ್ ನಾಯಕರು ಪದೇ ಪದೇ ಸಭೆ ಮಾಡೋದೇಕೆ.ನಿಮ್ಮ ಶಾಸಕರು ಓಡಿ ಹೋದ್ರೆ ಅದು ನಿಮ್ಮ ಜವಾಬ್ದಾರಿಯೇ ಹೊರತು ಬಿಜೆಪಿ ಹೊಣೆಯಲ್ಲ.ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡೋದಿಲ್ಲ ಎಂದ್ರು.









