ಬೆಂಗಳೂರು:ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿರುವ ಕಾಯ್ದೆಗಳ ಬದಲಾವಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ರವಾನಿಸಿದ್ದು, ಇದು ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮ ಪೂರ್ವ ತಯಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟುವ ಸಂಕಲ್ಪ ಕೈಗೊಂಡರು. ಜತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:
ಕಾಂಗ್ರೆಸ್ ಪಕ್ಷವು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಜನರಿಗೆ ಕೃಷಿ ಮಾಡಲು ಭೂಮಿ ನೀಡಿದೆ. ಅದರೆ ಈಗಿನ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ರೈತರಿಗೆ ಮರಣ ಶಾಸನ ಬರೆಯುತ್ತಿದೆ. ಅದೇ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇನ್ನು ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ತಂದ ಕಾರ್ಮಿಕ ಕಾಯ್ದೆಯನ್ನು ಮೂರು ವರ್ಷ ರದ್ದು ಮಾಡಲು ಹೊರಟಿದ್ದಾರೆ.
ಇನ್ನು ಅವೈಜ್ಞಾನಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ. ಬೆಲೆ ಕಡಿಮೆ ಮಾಡಬೇಕಾದ ಸಮಯದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಬೆಲೆ ಏರಿಸಿ ಕೇಂದ್ರ ಸರ್ಕಾರ ಜನ ವಿರೋಧಿ ತೀರ್ಮಾನ ಕೈಗೊಂಡಿದೆ.
ಈ ಎಲ್ಲ ವಿಚಾರವಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಿ, ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ನಿಮಗೆ ಸಂದೇಶ ರವಾನಿಸುತ್ತೇವೆ.
ನಾವು ಸಂಪೂರ್ಣ ಸಹಕಾರ ನೀಡಿದರೂ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಯೂಟರ್ನ್ ಸರ್ಕಾರ. ಬೆಳಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆ ಬದಲಾಯಿಸುತ್ತದೆ. ಅಧಿವೇಶನ ಕರೆಯಲಿ ಎಲ್ಲವನ್ನು ಬಿಚ್ಚಿಡುತ್ತೇವೆ. ನಾನಾಗಲಿ ನಮ್ಮ ನಾಯಕರಾದ ಸಿದ್ದರಾಮಯ್ಯನವರಾಗಲಿ ಏನನ್ನೂ ಹೇಳುವುದೇ ಬೇಡ, ಮಾಧ್ಯಮಗಳೇ ಎಲ್ಲವನ್ನು ನಿಮ್ಮ ಮುಂದೆ ವಿವರಿಸುತ್ತಿವೆ.
ನಾವು ಸಲಹೆ ಕೊಡುತ್ತೇವೆ ಕೇಳಿ ಎಂದರೆ ನಮ್ಮ ಸಲಹೆ ಬೇಡ ಎಂದರು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಸಹಕಾರ ನೀಡಿದೆವು. ನಾವು ಈ ವಿಚಾರದಲ್ಲಿ ತೋರಿದ ಹೃದಯ ಶ್ರೀಮಂತಿಕೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಕಡೆಗೆ ಯಾವ ಮಟ್ಟಕ್ಕೆ ಇಳಿದರು ಎಂದರೆ, ಕಾರ್ಮಿಕರಿಗೆ ನೀಡುವ ಕಿಟ್ ಅನ್ನು ತಮ್ಮ ಫೋಟೋ ಹಾಕಿಕೊಂಡು ತಮ್ಮ ಬೆಂಬಲಿಗ ಮತದಾರರಿಗೆ ಕೊಟ್ಟರು.
ಅಧಿಕಾರ ಇಲ್ಲದಿದ್ದರೂ, ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯದ ಉದ್ದಗಲಕ್ಕೂ ಸಹಾಯ ಮಾಡಿದರು. ಆಮೂಲಕ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಿದರು. ರೈತರಿಗೆ ಸಹಾಯ ಮಾಡಿ ಅಂತಾ ಕೇಳಿಕೊಂಡರೂ ಅವರ ನೆರವಿಗೆ ಬರಲಿಲ್ಲ. ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿಲ್ಲ. ರೈತರ ಸಂಕಷ್ಟ ನೋಡಲಾಗದೆ ಕಾಂಗ್ರೆಸ್ ನಾಯಕರು 100 ಕೋಟಿ ರೂಪಾಯಿಗೂ ಹೆಚ್ಚಿನ ತರಕಾರಿ ಖರೀದಿಸಿದರು. ಆ ಮೂಲಕ ಬೆಲೆ ಕುಸಿತ ತಪ್ಪಿಸಿದರು. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ಆದರೆ ನಮಗೆ ಜನರ ಬಗ್ಗೆ ಇರುವ ಕಾಳಜಿ, ಬದ್ಧತೆ ಮುಖ್ಯ.
ಹೊರಗಡೆಯಿಂದ ಬರುವ ಜನರಿಗೆ ವಿಮಾನ ಸೌಲಭ್ಯ ಕೊಡುತ್ತೀರಿ. ಆದರೆ ದೇಶ ಕಟ್ಟುವ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಕಲ್ಪಿಸಲಿಲ್ಲ. ಇವರ ಬಳಿ ಮೂರು ಪಟ್ಟು ಹಣ ವಸೂಲಿ ಮಾಡಲು ಹೊರಟರು. ಇವರ ಪ್ರಯಾಣಕ್ಕೆ ಸಹಕರಿಸುವ ಬಗ್ಗೆ ನಮ್ಮ ಸಿದ್ದರಾಮಯ್ಯನವರು ಹಾಗೂ ರಾಹುಲ್ ಗಾಂಧಿ ಅವರಿಗೆ ಹೇಳಿದಾಗ ಮೊದಲು ಆ ಕೆಲಸ ಮೊದಲು ಮಾಡಿ ಎಂದು ಪ್ರೋತ್ಸಾಹ ನೀಡಿದರು.
ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡುವ ಆಹಾರ ಪದಾರ್ಥಗಳನ್ನೂ ದುರುಪಯೋಗ ಮಾಡಿಕೊಂಡರು. ಈ ಬಗ್ಗೆ ದೂರು ಕೊಟ್ಟರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಇಂತಾ ಭಂಡತನ ಯಾಕೆ ಮುಖ್ಯಮಂತ್ರಿಗಳೇ?
70 ವರ್ಷ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಅಂತಾ ಕೇಳುತ್ತಾರಲ್ಲಾ, ಈ ಬಡವರು, ಕಾರ್ಮಿಕರಿಗೆ ಧ್ವನಿಯಾಗಿ, ಆರ್ಥಿಕ ಬಲ ತುಂಬಿ ದೇಶವನ್ನು ಕಟ್ಟಿದ್ದೇವೆ. ಇದು ದೇಶಕ್ಕೆ ಕಾಂಗ್ರೆಸ್ ಕೊಡುಗೆ.
ಕೋವಿಡ್ ವಿಚಾರದಲ್ಲಿ ಸರ್ಕಾರ ವಿಫಲ:
ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅವರ ವೈಫಲ್ಯಗಳನ್ನು ಬಿಂಬಿಸುತ್ತಿರುವ ಮಾಧ್ಯಮಗಳೇ ಅದಕ್ಕೆ ಸಾಕ್ಷಿ. ನಿಮಗೆ ಧನ್ಯವಾದಗಳು. ರಾಜ್ಯದಲ್ಲಿ ಸಾವು-ನೋವು ಹೆಚ್ಚುತ್ತಿರುವ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ನಮ್ಮ ಸಲಹೆ ಕೇಳಿದರಷ್ಟೇ ಕೊಡುತ್ತೇವೆ.
ಕಾರ್ಯಕರ್ತರಿಗೆ ಧ್ವನಿಯಾಗಲು ಈ ಕಾರ್ಯಕ್ರಮ:
ಈ ಕಾರ್ಯಕ್ರಮ ನನ್ನನ್ನಾಗಲಿ, ಕಾರ್ಯಾಧ್ಯಕ್ಷರನ್ನಾಗಲಿ ಅಥವಾ ಇತರೆ ನಾಯಕರನ್ನು ಬಿಂಬಿಸಿಕೊಳ್ಳಲು ಮಾಡುತ್ತಿಲ್ಲ. ಈ ಕಾರ್ಯಕ್ರಮವನ್ನು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಕಾರ್ಯಕರ್ತರ ಧ್ವನಿಯಾಗಲು ನಡೆಸಲಾಗುತ್ತಿದೆ. ಕಾರ್ಯಕರ್ತರು ಶಕ್ತಿಶಾಲಿಯಾದರೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂಬುದು ನನ್ನ ನಂಬಿಕೆ.
ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ನನಗೆ ಇದು ಅಧಿಕಾರವಲ್ಲ, ಜವಾಬ್ದಾರಿ. ಪಕ್ಷದ ಕಾರ್ಯಕರ್ತನಾಗಿ ನಾನು ನಿಮ್ಮೆಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲು ಬಯಸುತ್ತೇನೆ.
ನನ್ನನ್ನು ಜೈಲಿಗೆ ಕಳುಹಿಸಿದಾಗ ಡಿ.ಕೆ ಶಿವಕುಮಾರ್ ರಾಜಕೀಯ ಅಂತ್ಯವಾಯ್ತು ಅಂತಾ ಮಾತನಾಡಿದರು. ನಮ್ಮ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನ್ನ ಜತೆ ಒಂದು ಗಂಟೆ ಮಾತುಕತೆ ನಡೆಸಿ ನನಗೆ ಶಕ್ತಿ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಎಷ್ಟು ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನಾವು ಈ ಸಂದರ್ಭದಲ್ಲಿ ಯೋಚಿಸಬೇಕು.
ಎನ್ಎಸ್ ಯುಐ ಹೆಣ್ಣುಮಗಳು ಇಂದು ಅಧ್ಯಕ್ಷೆಯಾಗಿದ್ದಾಳೆ. ಒಂದು ಕಾಲದಲ್ಲಿ ಮಹಿಳಾ ಕಾಂಗ್ರೆಸ್ ನವರಿಗೆ ವೇದಿಕೆ ಮೇಲೆ ಜಾಗ ಸಿಗುತ್ತಿರಲಿಲ್ಲ. ಎನ್ ಎಸ್ ಯುಐ, ಯೂತ್ ಕಾಂಗ್ರೆಸ್ ಅನ್ನು ಕೇವಲ ಹೋರಾಟ ಮಾಡಲು ಬಳಸಿಕೊಳ್ಳುತ್ತಿದ್ದರು. ಇದನ್ನು ನೋಡಿದ್ದೇನೆ, ಅನುಭವಿಸಿದ್ದೇನೆ. ಇವರು ಇಲ್ಲದಿದ್ದರೆ ಪಕ್ಷ ಇಲ್ಲ. ಇವರು ಪಕ್ಷದ ಆಧಾರ ಸ್ಥಂಭ.
ಹೀಗಾಗಿ ಈ ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯಿಂದ ಕೇಡರ್ ಬೇಸ್ ಪಕ್ಷವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೂಡ ಬೂತ್ ಮಟ್ಟದಲ್ಲಿ ಪಕ್ಷ ಬಲವಾಗುವಂತೆ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾವು ಎಲ್ಲರೂ ದೇಶಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಬೇಕು. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಈ ರಾಷ್ಟ್ರ ಧ್ವಜವನ್ನು ಹಾಕಿಕೊಳ್ಳಲು ಬಿಜೆಪಿ, ಜನತಾದಳ, ಕಮ್ಯುನಿಸ್ಟರಿಗೆ ಶಕ್ತಿ ಇಲ್ಲ. ಆದರೆ ನಿಮಗೆ ಈ ಭಾಗ್ಯ ಇದೆ. ದೇಶ ಕಟ್ಟಲು ಒಂದು ಪಕ್ಷ ಸ್ಥಾಪಿತವಾಗಿದೆ ಎಂದಾದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನೀವು ಆ ಪಕ್ಷದ ಸದಸ್ಯರಾಗಿರುವುದಕ್ಕೆ ಹೆಮ್ಮೆ ಪಡಿ.
ಬಾಬು ಜಗಜೀವನ್ ರಾಮ್ ಕೊನೆಯಾಸೆ:
ಒಮ್ಮೆ ರಾಜ್ಯದ ಯುವ ಘಟಕ, ಎನ್ ಎಸ್ ಯುಐ ಹಾಗೂ ಇತರೆ ಪ್ರತಿನಿಧಿಗಳು ನಾವು ಸಮಾವೇಶಕ್ಕೆ ತೆರಳಿದ್ದಾಗ ರಾಷ್ಟ್ರೀಯ ಅಧ್ಯಕ್ಷರಾದ ರಾಜೀವ್ ಗಾಂಧಿ ಅವರನ್ನು ನೋಡಲು ಕಾಯುತ್ತಿದ್ದೆವು. ಆಗ ಒಬ್ಬ ವಯಸ್ಸಾದವರು ಗೇಟ್ ಬಳಿ ಬಂದಾಗ ಒಳಗಡೆಯಿಂದ ಓಡಿ ಬಂದ ರಾಜೀವ್ ಗಾಂಧಿ ಅವರು ಅವರನ್ನು ಸ್ವಾಗತಿಸಿ ಕರೆದೊಯ್ದು, ಸುಮಾರು ಹೊತ್ತು ಮಾತನಾಡಿಸಿ ಕಳುಹಿಸಿದರು. ನಾವು ಒಳಗೆ ಹೋದಾಗ, ಅವರು ಯಾರು ಎಂದು ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನಾನು ನಿಮ್ಮ ತಾತ, ತಾಯಿ ಜತೆ ಕೆಲಸ ಮಾಡಿದ್ದೀನಿ. ಭಿನ್ನಾಭಿಪ್ರಾಯವಾಗಿ ಬೇರೆ ಪಕ್ಷ ಕಟ್ಟಿದೆ. ನಾನು ಸಾಯೋ ಮುನ್ನ ಕಾಂಗ್ರೆಸಿಗನಾಗಿಯೇ ಸಾಯಬೇಕು ಎಂದು ಹೇಳಿದ್ದಾಗಿ ತಿಳಿಸಿದರು. ಇದು ಈ ಪಕ್ಷಕ್ಕೆ ಇರುವ ಶಕ್ತಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಧ್ವಜವೇ ನಮ್ಮ ಧರ್ಮ.









