ಬಿಜೆಪಿ ಅಂದ್ರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ; ಡಿ.ಕೆ. ಶಿವಕುಮಾರ್ ವ್ಯಂಗ್ಯ

0
2

ಬೆಂಗಳೂರು:’ಬಿಜೆಪಿ ಎಂದರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ. ಹಾಗೆಂದು ಆ ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಲಾಕ್ ಮೇಲ್, ಲಂಚದ ಆರೋಪ ಕೇಳಿ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ನೈತಿಕ ಹೊಣೆ ಹೊರಬೇಕಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು;

‘ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿನ್ನೆ ಸಂಪುಟ ವಿಸ್ತರಣೆ ಮಾಡಿದ್ದೀರ. ನೀವು ಯಾರನ್ನ ಬೇಕಾದರೂ ಮಾಡಿಕೊಳ್ಳಿ. ನಮ್ಮದು ಯಾವ ಅಭ್ಯಂತರವೂ ಇಲ್ಲ.

ನಿಮ್ಮವರೇ ಬ್ಲಾಕ್ ಮೇಲರ್ಸ್ ಸಂಪುಟ ಎಂದಿದ್ದಾರೆ. ನಿಮ್ಮ ಸಿಡಿಯ ಬಗ್ಗೆಯೂ ಮಾತನಾಡಿದ್ದಾರೆ.

ಬ್ಲಾಕ್ ಮೇಲರ್ ಗಳು, ಲಂಚ ನೀಡಿರುವವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ನಿಮ್ಮದೇ ಪಕ್ಷದ ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು ಹೇಳಿಕೆ ಕೊಟ್ಟಿದ್ದಾರೆ.

ನೀವು ಲಂಚ ಪಡೆದಿದ್ದೀರಿ ಎಂಬ ಮಾತುಗಳು ಕೇಳಿ ಬಂದಿವೆ. ಇದ್ಯಾವುದೂ ನನ್ನ ಹೇಳಿಕೆಯಲ್ಲ. ಇದೆಲ್ಲವೂ ಬಿಜೆಪಿ ಧ್ವನಿ.

ಸಿಡಿಯಲ್ಲಿ ಏನಿದೆ ಎಂಬುದು ಅದನ್ನು ನೋಡಿ, ಚರ್ಚೆ ಮಾಡಿರುವ ಬಿಜೆಪಿಯವರಿಗೆ ಗೊತ್ತಿದೆ.

ನಾನು ಕಾರವಾರದಲ್ಲೇ ಸಿಡಿ ಬಗ್ಗೆ ಹೇಳಿಕೆ ಕೊಟ್ಟಿದ್ದೆ. ಅದನ್ನ ತೆಗೆದಿಡಿ ಅಂತ ಹೋಂ ಮಿನಿಸ್ಟರ್ ಹೇಳಿದ್ದರು. ಈಗ ನಿಮ್ಮವರೇ ತೆಗೆದಿಡುತ್ತಿದ್ದಾರೆ ನೋಡಿ.

ಬಿಜೆಪಿಯವರೇ ಸಿಡಿ ಮತ್ತು ಲಂಚದ ಬಗ್ಗೆ ಹೇಳಿಕೆ ನೀಡ್ತಿದ್ದಾರೆ. ಇದು ಐಪಿಸಿ ಅಪರಾಧ ಆಗುತ್ತದೆ.

ಸಿಡಿ ಒಳಗೆ ಏನಿದೆ ಎಂಬುದು ನಿಮ್ಮವರಿಗೇ ಗೊತ್ತಿದೆ. ಇದರ ಜತೆ ಲಂಚದ ಬಗ್ಗೆಯೂ ಮಾತನಾಡಿದ್ದಾರೆ.

ಎಷ್ಟು ಲಂಚ ಕೊಟ್ಟಿದ್ದಾರೆ? ಮತ್ತೊಬ್ಬ ಸಚಿವರು ಅದೆಷ್ಟೋ ಖರ್ಚು ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಲ್ಲವೇ?

ಇಷ್ಟೆಲ್ಲಾ ಆಗುತ್ತಿದ್ದರೂ ಇಡಿ, ಐಟಿ, ಎಸಿಬಿ ಏನು ಮಾಡ್ತಿವರ? ಈ ಸಂಸ್ಥೆಗಳು ಯಾಕೆ ಸುಮ್ಮನಿವೆ? ಇವರೆಲ್ಲರೂ ಸುಮೋಟೋ ಕೇಸ್ ಯಾಕೆ ದಾಖಲಿಸುತ್ತಿಲ್ಲ?

ಬ್ಲಾಕ್ ಮೇಲ್, ಲಂಚ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು.

ಐಟಿ,ಇಡಿಯವರು ಸುಮೋಟೋ ಕೇಸ್ ಹಾಕಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ.

ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿಮ್ಮ ನಾಯಕರೇ ಇಷ್ಟೆಲ್ಲಾ ಆರೋಪ ಮಾಡಿರುವಾಗ ನೀವು ನೈತಿಕ ಹೊಣೆ ಹೊರಬೇಕಿದೆ.’

- Call for authors -

LEAVE A REPLY

Please enter your comment!
Please enter your name here