ಬಿಜೆಪಿ ತೊರೆದು ಜೆಡಿಎಸ್, ಕಾಂಗ್ರೆಸ್‍ಗೆ ಬನ್ನಿ: ಡಿಕೆಶಿ ಕರೆ

0
1555

ಚನ್ನಪಟ್ಟಣ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರದು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವ ಜಾಯಮಾನ. ಅಂಥ ನಾಯಕನನ್ನು ನಂಬಿ, ಬದುಕು ಮತ್ತು ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದರು.

ಚನ್ನಪಟ್ಟಣದಲ್ಲಿ ಇಂದು ನಡೆದ 745 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣದಲ್ಲಿ ಬಿಜೆಪಿಗೆ ಹೋಗಿ ಅನೇಕರು ಮೋಸ ಹೋಗಿದ್ದಾರೆ. ಯಾರನ್ನೋ ಬದುಕಿಸಲು ಶ್ರಮಪಡುವ ಬದಲು ನಿಮ್ಮ ಬದುಕು, ಭವಿಷ್ಯವನ್ನು ರೂಪಿಸಿಕೊಳ್ಳಲು ಪಕ್ಷಾಂತರ ಮಾಡಬೇಕು ಎಂದರು.

ಬಿಜೆಪಿಗೆ ಹೋಗಿದ್ದವರಿಗೆ ತಮ್ಮ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಬಾಗಿಲು ಸದಾ ತೆರೆದಿರುತ್ತದೆ. ಬಿಜೆಪಿ ತೊರೆದು, ಜೆಡಿಎಸ್ ಅಥವಾ ಕಾಂಗ್ರೆಸ್ ಪೈಕಿ ಯಾವುದಾದರೂ ಪಕ್ಷ ಸೇರ್ಪಡೆಗೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಪರ ಕೆಲಸ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.

ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವನ್ನು ಕೆಡವಿ, ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಸಚಿವ ಯೋಗೇಶ್ವರ್ ನಡೆಸಿದ ಸಂಚು ಫಲಿಸಲಿಲ್ಲ. ರಾಮನಗರ ಉಪ ಚುನಾವಣೆಯಲ್ಲಿ ಒಬ್ಬ ಗಂಡನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು, ಅರ್ಜಿ ಹಾಕಿಸಿದರು. ಆದರೆ, ಆ ಗಂಡು ತಾನು ಮೋಸ ಹೋಗಿದ್ದನ್ನು ಮನಗಂಡು ನಮ್ಮ ಬಳಿ ವಾಪಸ್ಸಾದ ಎಂದು ಅವರು ವ್ಯಂಗ್ಯವಾಡಿದರು.

ನಾವು ರೆಡಿಮೇಡ್ ಗಂಡುಗಳು:

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು, ನನ್ನ ತಮ್ಮ ಡಿ.ಕೆ.ಸುರೇಶ್ ರೆಡಿಮೇಡ್ ಗಂಡುಗಳು. ನಮ್ಮನ್ನು ಸೋಲಿಸಲು ಆಗದು. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ. ಇನ್ನು, ವಿಷ ಕುಡಿದ ಮಕ್ಕಳು ಬದುಕುತ್ತವಾ ಎನ್ನುವ ನಾಣ್ಣುಡಿಯೊಂದಿಗೆ ಶಿವಕುಮಾರ್ ಅವರು ತಮ್ಮ ರಾಜಕೀಯ ಕಡುವೈರಿ ಯೋಗೇಶ್ವರ್ ಅವರನ್ನು ತಮ್ಮ ಭಾಷಣದುದ್ದಕ್ಕೂ ಟಾಂಗ್ ನೀಡಿದರು.

ರಾಜ್ಯದಲ್ಲಿ ಜಾತ್ಯತೀತ ತತ್ವ, ಸಿದ್ಧಾಂತರದ ಮೇಲೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೆ ಕೆಲಸ ಮಾಡಲು ಕನಿಷ್ಠ 1 ವರ್ಷದ ಅವಕಾಶವ ನೀಡುವಷ್ಟೂ ತಾಳ್ಮೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲ. ಸರಕಾರ ಕೆಡವಲು ಯಡಿಯೂರಪ್ಪ ಜತೆ ಯೋಗೇಶ್ವರ್ ಇನ್ನಿಲ್ಲದ ಕಸರತ್ತು, ಮಸಲತ್ತು ನಡೆಸಿದರು. ಅದ್ಯಾವುದೂ ಕೈಗೂಡಲಿಲ್ಲ. ಮುಂದೆಯೂ ಕೈಗೂಡುವುದಿಲ್ಲ ಎಂದು ಶಿವಕುಮಾರ್ ಗೇಲಿ ಮಾಡಿದರು.

- Call for authors -

LEAVE A REPLY

Please enter your comment!
Please enter your name here