ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ದಿನದ 24 ಗಂಟೆಯೂ ದಲ್ಲಾಳಿಗಳು ಓಡಾಡುತ್ತಿರುವುದನ್ನು ಗಮನಿಸಿದ್ದೇವೆ. ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹವರನ್ನು ನಿರ್ಬಂಧಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ದಿನದ 24 ಗಂಟೆಯೂ ದಲ್ಲಾಳಿಗಳು ಓಡಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು ಇದನ್ನು ತಡೆಗಟ್ಟ ಬೇಕಾಗಿದೆ ಎಂದು ಹೇಳಿದ್ದರು.
ಮಾಧ್ಯಮಗಳವರು ಸಹ ಪದೇ ಪದೇ ಪ್ರತ್ಯೇಕ ಪ್ರತ್ಯೇಕವಾಗಿ ಬಂದು ಸಚಿವರು ಮತ್ತು ಅಧಿಕಾರಿಗಳನ್ಮು ಭೇಟಿ ಮಾಡುವುದರಿಂದ ಸುಗಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.
ಹೆಚ್.ಡಿ.ರೇವಣ್ಣ ಅವರಿಗೆ ನಿಯೋಜಿತವಾಗಿರುವ ಮನೆ ನವೀಕರಣ ಮಾಡುತ್ತಿಲ್ಲ. ಕುಮಾರಕೃಪಾದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಹರಿದು ಹೋಗುವ ಪೈಪ್ ಲೈನ್ ಒಡೆದು ಹೋಗಿತ್ತು. ಹಾಗಾಗಿ ಪೈಪ್ ಲೈನ್ ಬದಲಾವಣೆ ಕಾಮಗಾರಿ ಮಾಡಲಾಗುತ್ತಿದೆ. ಜತೆಗೆ ಡಿಸೆಂಬರ್ ನಿಂದಲೇ ಕಾಮಗಾರಿ ನಡೆಯುತ್ತಿದೆ. ವೆಚ್ವ ಕಡಿತ ಹಿನ್ನೆಲೆಯಲ್ಲಿ ಯಾವುದೇ ಸಚಿವರ ನಿವಾಸ ನವೀಕರಣಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿದರು.









