ಬೆಂಗಳೂರು: ಮೈತ್ರಿ ಸರ್ಕಾರ 8%, 10% ಕಮಿಷನ್ ಸರ್ಕಾರ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಕಮಿಷನ್ ಸರ್ಕಾರದ ಪಿತಾಮಹಾ ಯಡಿಯೂರಪ್ಪ ಅವರೇ ಅಲ್ಲವೇ? ಸರ್ಕಾರದಲ್ಲಿ ಕಮಿಷನ್ ವ್ಯವಹಾರವನ್ನು ಪರಿಚಯಿಸಿದವರು ಅವರೇ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ತಮ್ಮ ವಯಸ್ಸಿಗೆ ತಕ್ಕಂತಾದರೂ ನಡೆದುಕೊಳ್ಳಲಿ. ತಾವು ಆಪರೇಷನ್ ಕಮಲ ಮಾಡುವುದಿಲ್ಲ ಎನ್ಮುತ್ತಾರೆ. ಈಗಲೂ ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಸಭೆ ನಡೆಸುತ್ತಿದ್ದಾರೆ. ನಿನ್ನೆ ನಮ್ಮ ಶಾಸಕರಾದ ನಾಗಮಂಗಲ ಸುರೇಶ್ ಗೌಡ ಹಾಗೂ ಶಿವಳ್ಳಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ. ಅದೇನೋ ಅವರಿಗೆ 18 ಶಾಸಕರ ಬೆಂಬಲ ಸಿಕ್ಕಿದೆಯಂತೆ ಶಾಸಕರನ್ನು ಬಾಂಬೆಗೋ, ಪೂನಾಗೋ ಕರೆದುಕೊಂಡು ಹೋಗಿ ಅಲ್ಲಿಂದ ಮಿಲಿಟರಿ ಎಸ್ಕಾರ್ಟ ನಲ್ಲಿ ವಿಧಾನಸೌಧಕ್ಕೆ ಕರೆತರುತ್ತಾರಂತೆ ಎಂದರು.
ಅಪ್ಪಮಕ್ಕಳು ಲೂಟಿಕೋರರು ಎಂದಿದ್ದಾರೆ. ಹಿಂದೆ ಹುಬ್ಬಳ್ಳಿಯಲ್ಲಿ ಹೀಗೇ ಹೇಳಿಕೆ ಕೊಟ್ಟರು. ಆನಂತರ ಜೈಲಿಗೆ ಹೋದವರು ಯಾರು. ನಮ್ಮನ್ನು ಕಮೀಷನ್ ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿ ಕಮೀಷನ್ ವ್ಯವಹಾರ ಪ್ರಾರಂಭಿಸಿದವರು ಯಾರು. ಈಗಲೂ ಶಿವರಾಮಕಾರಂತ ಬಡಾವಣೆ ಡಿ ನೋಟಿಫಿಕೇಶನ್ ಪ್ರಕರಣ ಸುಪ್ರಿಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ನಾವೂ ಕೂಡ ಇಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಇಷ್ಟು ದಿನ ನಾವೂ ತಾಳ್ಮೆಯಿಂದ ಇದ್ದೆವು. ಈಗ ನಾವೂ ಕೂಡ ದಾಖಲೆಗಳನ್ನು ಹೊರಗೆ ತೆಗೆದ್ರೆ ಏನು ಪರಿಣಾಮ ಆಗುತ್ತದೆ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.








