ಹೆಲಿಕ್ಯಾಪ್ಟರ್ ದುಂದು ವೆಚ್ಚ ಸಿಎಂ ಹೇಳಿಕೆಗೆ: ಬಿಎಸ್ವೈ ಗರಂ

0
19

ಬೆಂಗಳೂರು: ಉಸ್ತುವಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಬಿ.ಎಸ್ ಯಡಿಯೂರಪ್ಪ ಹೆಲಿಕ್ಯಾಪ್ಟರ್ ಬಳಸಿ ದುಂದು ವೆಚ್ಚ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿದ‌ ಹೇಳಿಕೆಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಈಗಲೂ ನಾನು ಪ್ರಯಾಣದ ವೆಚ್ಚ ಭರಿಸಲು ಸಿದ್ದ‌ನಿದ್ದೇನೆ ಎಂದು ಮುಖ್ಯಮಂತ್ರಿಗಳಿಗೆ ಖಾರವಾಗಿ ಪತ್ರ ಬರೆದಿದ್ದಾರೆ.

ಮೇ 2ರಂದು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಡಾ.ಮಹಾಂತ ಶಿವಯೋಗಿಗಳು ಲಿಂಗೈಕ್ಯರಾಗಿದ್ದ ಸಮಯದಲ್ಲಿ ಉಸ್ತುವಾರಿ ಸಿಎಂ ಆಗಿ ನನ್ನ ಕರ್ತವ್ಯವೆಂದು ತಿಳಿದು ಅಲ್ಲಿಗೆ ಹೋಗಿ ಗೌರವ ಸಲ್ಲಿಸಿದ್ದೆ, ನಂತರ ದಾವಣಗೆರೆ ಜಿಲ್ಲೆ‌ ಚನ್ನಗಿರಿ ತಾಲ್ಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ನನಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದ್ದರು. ನನ್ನ ಪ್ರಮುಖ ವಾಸದ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ನೀಡಿದ್ದೆ, ಆದರೆ ಭಾಷಣದಲ್ಲಿ ಹಗರವಾಗಿ ಮಾತನಾಡಿರುವುದು ಅತ್ಯಂತ ನೋವು ತಂದಿದೆ ಎಂದು ಪತ್ರದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಭದ ಸೂಕ್ಷ್ಮತೆಯನ್ನು ಅರಿಯದೆ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದಿತ್ತು. ನಾನು ಈಗಲೂ ನನ್ನ ಪ್ರವಾಸದ ಪ್ರಯಾಣದ ವೆಚ್ಚವನ್ನು ಭರಿಸಲು ಸಿದ್ದನಿದ್ದೇನೆ, ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಜನರ ದಾರಿತಪ್ಪಿಸುವಂತಹ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ, ವೈಯಕ್ತಿಕವಾಗಿ ತಮಗೆ ಸ್ವಾಮೀಜಿಗಳ ಬಗ್ಗೆ ಗೌರವ ಇಲ್ಲದಿರಬಹುದು, ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೆರೆ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದಿರಿ, ಈಗ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾದ ವೇಳೆ ಗೌರವ ಸಲ್ಲಿಕೆ ಮಾಡಿದ್ದನ್ನು ದುಂದುವೆಚ್ಚ ಎಂದು ಅಹಂಕಾರದಿಂದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

- Call for authors -

LEAVE A REPLY

Please enter your comment!
Please enter your name here