ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಅನ್ನೊ ಗೊಂದಲದಲ್ಲಿಕ್ಕೆ ಸಿಲುಕಿದ್ದಾರೆ ಬಿಜೆಪಿ ಶಾಸಕರು, ಸಚಿವರು. ಜೊತೆಗೆ ಸಚಿವ ಸ್ಥಾನಕ್ಕಾಗಿ ಜಾತಕ ಪಕ್ಷಗಳಂತೆ ಕಾಯ್ತಿದ್ದ ಮೂಲ ಬಿಜೆಪಿಗರ ಆಸೆಗೆ ಬೆಂಕಿ ಬಿದ್ದಿದೆ. ಕೇವಲ ಮೂವರು ವಲಸಿಗರಿಗೆ ಮಾತ್ರ ಸಚಿವ ಸ್ಥಾನ ನೀಡಲು ಸಿಎಂ ಬಿಎಸ್ವೈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಸಂಪುಟ ವಿಸ್ತರಣೆಯದ್ದೇ ಭಾರೀ ಸದ್ದು. ಆದ್ರೆ, ಸಿಎಂ ಬಿಎಸ್ವೈ ಸಂಪುಟ ವಿಸ್ತರಣೆಯನ್ನಷ್ಟೇ ಮಾಡ್ತಾರೋ ಅಥವಾ ಪುನರಚನೆಗೆ ಕೈ ಹಾಕ್ತಾರೋ ಅನ್ನೊ ಪ್ರಶ್ನೆಗೆ ಮಾತ್ರ ಬಿಜೆಪಿಯ ಯಾರಲ್ಲೂ ಉತ್ತರವಿಲ್ಲ. ಕೊರೋನಾ ನಿರ್ವಹಣೆಯಲ್ಲಿ ವಿಫಲವಾದ ಸಚಿವರಿಗೆ ಕೋಕ್ ಕೊಟ್ಟು ಹೊಸ ಸಚಿವರಿಗೆ ಬಿಎಸ್ವೈ ಮಣೆ ಹಾಕೋ ಮೂಲಕ ಸಂಪುಟ ಪುನಾರಚನೆ ಮಾಡ್ತಾರೆ ಅನ್ನೋ ಮಾತುಗಳು ದಟ್ಟವಾಗಿದ್ರೂ ಕೂಡ ಆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರ ಬಿದ್ದಿಲ್ಲ. ಇನ್ನೂ ಸಂಪುಟ ವಿಸ್ತರಣೆ ಯಾದ್ರೆ ಯಾವೆಲ್ಲಾ ಶಾಸಕರು ಸಚಿವರಾಗಿ ಬಡ್ತಿ ಪಡೀತಾರೆ ಅನ್ನೋದನ್ನ ಕೂಡ ಬಿಜೆಪಿ ಗೌಪ್ಯವಾಗಿಟ್ಟಿದೆ.
ಬಿಜೆಪಿ ಪಕ್ಷಕ್ಕಾಗಿ ಹತ್ತಾರು ವರ್ಷ ಸೇವೆ ಸಲ್ಲಿಸಿರೋ ಬಿಜೆಪಿಯ ಮೂಲ ಶಾಸಕರು ಕಳೆದ ಒಂದು ವರ್ಷದಿಂದ ಸಚಿವರಾಗ್ತೀವಿ ಅಂತಾ ಜಾತಕ ಪಕ್ಷಿಗಳಂತೆ ಕಾಯ್ತಿದಾರೆ. ಆದ್ರೆ, ಈ ಭಾರಿಯೂ ಅವರ ಕನಸು ನನಸಾಗುವಂತೆ ಕಾಣ್ತಿಲ್ಲ. ಕೇವಲ ಮೂವರು ವಿಧಾನ ಪರಿಷತ್ ನೂತನ ಸದಸ್ಯರು ಮಾತ್ರ ಈ ಭಾರೀ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೆ ಮಂತ್ರಿ ಭಾಗ್ಯ ಒಲಿಯಲಿದೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಅಲ್ಲದೆ, ಈ ಬಾರಿ ಪ್ರಮಾಣ ವಚನ ದಿನಾಂಕ, ಕಾರ್ಯಕ್ರಮ, ನೂತನ ಸಚಿವರ ಹೆಸರು ಎಲ್ಲವನ್ನೂ ಅತ್ಯಂತ ಗೌಪ್ಯವಾಗಿಡಲು ಬಿಎಸ್ವೈ ತೀರ್ಮಾನಿಸಿದ್ದಾರೆ. ಪ್ರಮಾಣ ವಚನ ದಿನಾಂಕ ನಿಗಧಿಯಾದ ದಿನವೇ ರಾಜ್ಯಪಾಲರನ್ನ ಭೇಟಿಯಾಗಿ ಅನುಮತಿ ಪಡೆದು ಅಂದೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವಂತೆ ಪ್ಲಾನ್ ಮಾಡಲಾಗಿದೆ. ಅಲ್ಲದೆ, ಪ್ರಮಾಣ ವಚನ ಕಾರ್ಯಕ್ರಮವೂ ಅತ್ಯಂತ ಗೌಪ್ಯವಾಗಿ ನಡೆಯಲಿದೆ. ಯಾರು ಪ್ರಮಾಣ ವಚನ ಸ್ವಾಕರಿಸ್ತಾರೋ ಆ ಶಾಸಕರಿಗೆ ಮಾತ್ರ ಆಹ್ವಾನ ನೀಡಲು ನಿರ್ಧರಿಸಲಾಗಿದೆ.









