ಬೆಂಗಳೂರು:ರಾಜ್ಯದ ಆರ್ಥಿಕ ಸ್ಥಿತಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿಯ ಮಿತಿಯೊಳಗಿದೆ ಎಂದು ಸಿಎಜಿ ವರದಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಸಾರ್ವಜನಿಕ ಲೆಕ್ಕಗಳಲ್ಲಿನ ನಿಧಿ ಲೆಕ್ಕಗಳಿಗೆ 1,012 ಕೋಟಿ ರೂ ಮೊತ್ತದ ವೆಚ್ಚಗಳು ಹೊಂದಾಣಿಕೆ ಆಗಿಲ್ಲ ಎಂದು ಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ರಾಜ್ಯ ಹಣಕಾಸು ಸ್ಥಿತಿಗತಿ ಕುರಿತ ಮಹಾಲೇಖಾಪಾಲರ ವರದಿ ವಿಧಾನಸಭೆಯಲ್ಲಿ ಮಂಡಿಸಲಾಯಿತು. 2016-17 ನೇ ಸಾಲಿನ ಹಣಕಾಸು ಮೇಲಿನ ವರದಿ ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ವರದಿ ಬೆಳಕು ಚೆಲ್ಲಿದ್ದು, 2016-17 ರಲ್ಲಿ 496 ಕೋಟಿ ರೂ ರಾಜಸ್ವ ಸಂಗ್ರಹ ಇಳಿಕೆಯಾಗಿದೆ ಈ ಸಾಲಿನಲ್ಲಿ ಒಟ್ಟು 1,293 ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ ಎಂದು ಉಲ್ಲೇಖಿಸಲಾಗಿದೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ತೆರಿಗೆಯೇತರ ಆದಾಯದ ಅನುಪಾತ ಕಡಿಮೆ ಇದೆ ಮುಂದಿನ ವರ್ಷಗಳಲ್ಲಿ ಬಳಕೆದಾರರ ಕರದ ಪರಿಷ್ಕರಣೆ ಮೂಲಕ ತೆರಿಗೆಯೇತರ ಆದಾಯ ಹೆಚ್ಚಿಸುವ ಅಗತ್ಯ ಇದೆ ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದು, ರಾಜಸ್ವ ವೆಚ್ಚ 2016-17 ರಲ್ಲಿ ಶೇ.13 ರಷ್ಟು ಹೆಚ್ಚಳ ಕಳೆದ ಅವಧಿಯ ಬಜೆಟ್ ನಲ್ಲಿ 13 ಸಾವಿರ ಕೋಟಿ ರೂ ಬಳಕೆಯಾಗದೇ ಉಳಿದಿದೆ ಎಂದಿದೆ.
2016-17 ರ ಒಟ್ಟು ರಾಜಸ್ವ ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು 47 ಸಾವಿರ ಕೋಟಿ ರೂಗಳಿಗೆ ಹೆಚ್ಚಿದೆ.ರಾಜಸ್ವ ವೆಚ್ಚದ ಶೇ.80 ರಷ್ಟು ಸರ್ಕಾರಿ ನೌಕರರ ವೇತನ, ನಿವೃತ್ತಿ, ವೇತನ, ಸಹಾಯ ಧನ, ಬಡ್ಡಿ ಪಾವತಿ, ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಗಳಿಗೆ ಬಳಕೆಯಾಗಿದೆ ಎಂದು ವರದಿ ಹೇಳಿದೆ.
ವರದಿಯ ಹೈಲೈಟ್ಸ್:
- 2016-17 ರಲ್ಲಿ 496 ಕೋಟಿ ರೂ ರಾಜಸ್ವ ಸಂಗ್ರಹ ಇಳಿಕೆ
- 2016-17 ರಲ್ಲಿ ಸಾಲ ಹೆಚ್ಚಳ.2015-16 ಕ್ಕೆ ಹೊಲಿಸಿದ್ರೆ ಶೇ 40 ರಷ್ಟು ಸಾಲ ಹೆಚ್ಚಳ
- 230736 ಕೋಟಿ ಸಾಲ ಹೆಚ್ಚಳ
- ಸಾಲದ ಮೇಲಿನ 192 ಕೋಟಿ ಬಡ್ಡಿ ಪಾವತಿಗೆ ಹಣ ಬಿಡುಗಡೆ ಮಾಡಿರಲಿಲ್ಲ.
- 14 ನೇ ಹಣಕಾಸು ಆಯೋಗದ ಶಿಫಾರಸಿನ ಅನುದಾನಗಳು ಸರಿಯಾಗಿ ಬಿಡುಗಡೆ ಆಗಿದೆ.
- 15-16 ಕ್ಕೆ ಹೊಲಿಸಿದ್ರೆ 16-17 ರಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು 1031 ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ.
- ಸಾರ್ವಜನಿಕ ಲೆಕ್ಕಗಳಲ್ಲಿನ ನಿಧಿ ಲೆಕ್ಕಗಳಿಗೆ 1,012 ಕೋಟಿ ರೂ ಮೊತ್ತದ ವೆಚ್ಚಗಳು ಹೊಂದಾಣಿಕೆ ಆಗಿಲ್ಲ..
- ಬಜೆಟ್ ಸಂಪೂರ್ಣ ಬಳಕೆ ಆಗಿಲ್ಲ.2016 – 17 ರ ಬಜೆಟ್ ನಲ್ಲಿ 13007 ಕೋಟಿ ವೆಚ್ಚವಾಗದೇ ಉಳಿದಿತ್ತು.
- ಇಲ್ಲಿಯ ವರೆಗೆ ಒಟ್ಟು ನಿಗಮ, ಕಂಪನಿಗಳಲ್ಲಿ ಹೂಡಿದ 63115 ಕೋಟಿಗಳಲ್ಲಿ ಬಂದ ಪ್ರತಿಫಲ ಕೇವಲ ಶೇ 0.1 ರಷ್ಟು(82.50 ಕೋಟಿ) ಮಾತ್ರ









