ಮಂಡ್ಯ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಖ್ಯಮಂತ್ರಿಗಳ ಸೂಚನೆ!

0
241

ಮಂಡ್ಯ: ಕುಡಿಯುವ ನೀರನ್ನು ಒದಗಿಸಲು ಹಾಗೂ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ತತಕ್ಷಣ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಮಂಡ್ಯ ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು 1700 ಕೋಟಿ ರೂಗಳ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾಡಳಿತ ಸಿದ್ದಪಡಿಸುವಂತೆ ತಿಳಿಸಿದ ಅವರು ಮಂಡ್ಯ ನಗರದ ಸಮಗ್ರ ಅಭಿವೃದ್ಧಿಯ ಅನುದಾನಕ್ಕೆ ಕ್ರಿಯಾ ಯೋಜನೆ ಜಿಲ್ಲಾಡಳಿತ ಸಿದ್ದಪಡಿಸಿದ್ದು, ಅನುಮೋದನೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೈತರು ಯಾವ ಬೆಳೆಯನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂಬ ವಿಷಯದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಸಿದ್ಧಪಡಿಸಿ ಶೀಘ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಹೆಚ್ಚಿನ ಅವಕಾಶವಿದ್ದು, ಇದರ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದ ಮುಖ್ಯಮಂತ್ರಿಗಳು ನರೇಗಾ ಯೋಜನೆಯಡಿ ಅನೇಕ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳಿದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನ್ಮೂಖರಾಗ ಬೇಕು ಎಂದು ಅವರು ತಿಳಿಸಿದರು.

ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರ ಸೇವೆಯ ಕೊರತೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಆರೋಗ್ಯ ಇಲಾಖೆಯು ರಾತ್ರಿ ವೇಳೆ ವೈದ್ಯರ ಸೇವೆ ಸಿಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಸಂಬಂಧಿಸಿದ ವೈದ್ಯರಿಗೆ ನೀಡಬೇಕು ಎಂದು ತಿಳಿಸಿದ ಮುಖ್ಯ ಮಂತ್ರಿಗಳು ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಸಿಗದಿರುವವರು ಬಿಪಿಎಲ್ ಹಾಗೂ ಆಧಾರ್ ಕಾರ್ಡ್‌ನ್ನು ನೀಡಿ ಈ ಯೋಜನೆಯ ಸೌಲಭ್ಯ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ರಹಿತರಿಗೆ ಕೂಡಲೇ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನವನ್ನು ನೀಡಲು ಕ್ರಮವಹಿಸುವಂತೆ ಸೂಚಿಸಿದ ಅವರು ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ಹಾಗೂ ಅಗತ್ಯವಾಗಿ ಬೇಕಾಗಿರುವ ಶಾಲಾ ಕಟ್ಟಡಗಳು ಹಾಗೂ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.
ಯುವ ಜನರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಜಿಲ್ಲಾ ಕ್ರೀಡಾಂಗಣ ಹಾಗೂ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದ ಮುಖ್ಯಮಂತ್ರಿಗಳು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ಭೂಮಿಯನ್ನು ನೀಡಿರುವ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡಬೇಕು ಎಂದು ಅವರು ತಿಳಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 550 ಹಾಸಿಗೆಯ ಸಾಮಥ್ರ್ಯವಿರುವ ಸೌಲಭ್ಯವಿದ್ದು, ಇದನ್ನು 700 ಹಾಸಿಗೆಯ ಸಾಮಧ್ರ್ಯವಿರುವ ಸೌಲಭ್ಯಕ್ಕೆ ಮೇಲ್ದರ್ಜಗೆರೆಸಲು 30 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನೀಡುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಹೆಚ್.ಡಿ.ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್, ಸಾರಿಗೆ ಸಚಿವರಾದ ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಎಲ್ಲಾ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.

- Call for authors -

LEAVE A REPLY

Please enter your comment!
Please enter your name here