ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆಗೆ ಬದ್ಧ: ಸಿ ಎಂ ಘೋಷಣೆ

0
21

ಬೆಂಗಳೂರು: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದೆ. ಅದಕ್ಕೆ ನಾನು ಬದ್ಧನಾಗಿದ್ದು ಮುಂದಿನ ಬಜೆಟ್ ನಲ್ಲಿ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದರು.

ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅವರು ಕಾಲೇಜು ಶಿಕ್ಷಣ ಪಡೆದ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ನಾನು ಎಂದೂ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ಚುನಾವಣೆಯ ವೇಳೆ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದು ನನ್ನ ಆಂತರಿಕ ಒತ್ತಾಯದಿಂದ. ಆಸ್ಪತ್ರೆಗಳು ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ಹಾಗಾಗಿ ಒಂದು ಬಡ ಕುಟುಂಬ 10 ರಿಂದ 20 ಲಕ್ಷ ಹಣವನ್ನು ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ನಾನು ಮಾಡಿದ ಈ ಘೋಷಣೆಯನ್ನು ನಿಲ್ಲಿಸುವುದಿಲ್ಲ ಎಂದರು.

ಸರ್ಕಾರದ ಬೊಕ್ಕಸಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಬೇಕಿದೆ. 2004ರಲ್ಲಿ ಆರ್ಥಿಕ ಶಿಸ್ತನ್ನು ತರುವ ಉದ್ಧೇಶದಿಂದ ಒಂದು ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಅದರ ಇತಿಮಿತಿಯಲ್ಲೆ ನಾನು ಕೆಲಸ ಮಾಡಬೇಕಿದೆ. ಸಾಲ ಮನ್ನಾದಂತಹ ವಿಷಯವನ್ನೂ ಈ ಪರಿಧಿಯಲ್ಲಿಯೇ ಜಾರಿಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣಹಾಕಲು ನಾನು ಬದ್ಧನಿದ್ದೇನೆ ಎಂದು ಘೋಷಿಸಿದ ಅವರು ನಾನು ಬಳಸುತ್ತಿರುವ ಸರ್ಕಾರಿ ಕಾರಿಗೆ ನನ್ನ ಸ್ವಂತ ದುಡ್ಡಿನಿಂದಲೇ ಇಂಧನವನ್ನು ಹಾಕಿಸಿಕೊಳ್ಳುತ್ತಿದ್ದೇನೆ. ಬದಲಾವಣೆ ತರಬೇಕಾದರೆ ತುಂಬಾ ಸಾಹಸ ಮಾಡಬೇಕಿದೆ. ನನ್ನ ರಾಜ್ಯದ ಜನತೆ ಕಟ್ಟುವ ತೆರಿಗೆ ಹಣವನ್ನು ದುಂದು ವೆಚ್ಚ ಮಾಡದೇ ಒಂದೊಂದು ಪೈಸೆಯೂ ಸದ್ಭಳಕೆ ಆಗಬೇಕು.

ಸಚಿವರುಗಳಿಗೆ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ ಎನ್ನುವ ವರದಿಯನ್ನು ಪ್ರಸ್ತಾಪಿಸಿದ ಅವರು ನಾನು ಕಾರು ಖರೀದಿಯನ್ನು ಮಾಡಬಾರದು ಎಂದು ಹೇಳಿದ ಮೇಲೂ ಹೊಸ ಕಾರನ್ನು ಯಾರು ಖರೀದಿ ಮಾಡಿದ್ದಾರೆ ಎಂದು ಪರಿಶೀಲಿಸಿದೆ. ಅದು ಕಳೆದ ಸರ್ಕಾರದಲ್ಲಿ ಖರೀದಿ ಮಾಡಿದ ಕಾರು ಎಂಬುದು ತಿಳಿದು ಬಂದಿದೆ ಎಂದರು.

- Call for authors -

LEAVE A REPLY

Please enter your comment!
Please enter your name here