ಸಾಲಮನ್ನಾ ಕೊರತೆ ತುಂಬಲು ಶಾಸಕರ ನಿಧಿಗೆ ಕೈ ಇಟ್ಟರಾ ಸಿಎಂ?

0
409

ಬೆಂಗಳೂರು: ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಬೇಕಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಶಾಸಕರ ನಿಧಿ ಸೇರಿ ಬಳಕೆಯಾಗದ 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟಿದ್ದಾರೆ.ಇದರ ಜೊತೆ ಶಾಲಾ ಪ್ರದೇಶಾಭಿವೃದ್ಧಿ ಬೊಕ್ಕಸಕ್ಕೂ ಕೈ ಹಾಕಲು ನಿರ್ಧರಿಸಿದ್ದಾರೆ ಎಂದು ಸುದ್ದಿಲೋಕಕ್ಕೆ ಸಿಎಂ ಕಚೇರಿಯ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಸಾಲಮನ್ನಾ ಮಾಡಿದರೆ ಆರ್ಥಿಕ ಹೊಂದಾಣಿಕೆ‌ ಕಷ್ಟವಾಗಲಿದೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧದ ನಡುವೆಯೂ ಸಾಲಮನ್ನಾ ಮಾಡಲು‌ ಹೊರಡಿರುವ ಸಿಎಂ ಬೊಕ್ಕಸಕ್ಕೆ ಬರುವ ಹಣದ ಜೊತೆಗೆ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಹಣದ ಮೇಲೆ ಕಣ್ಣುಹಾಕಿದ್ದಾರೆ.

2013ರಿಂದ 2015-16ರವರೆಗೆ ಶಾಸಕರು ಬಳಸಿಕೊಳ್ಳದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಹಣವನ್ನು ಸಾಲಮನ್ನಾದಿಂದ ಆಗುವ ಹಣಕಾಸು‌ ಕೊರತೆ ತುಂಬಿಕೊಳ್ಳಲು ನಿರ್ಧರಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 391 ಕೋಟಿ ರೂ.ಗಳ ಹಣ ಹಾಗು ಕಾಂಗ್ರೆಸ್ ನ ನಾಲ್ಕು ವರ್ಷದ ಅವಧಿಯಲ್ಲಿ 611 ಕೋಟಿ ರೂ.ಸೇರಿ ಒಟ್ಟು 1002 ಕೋಟಿ ರೂ.ಗಳಷ್ಟು ಹಣ ಶಾಸಕರ ನಿಧಿಯಡಿ ಬಳಕೆಯಾಗದೆ ಬ್ಯಾಂಕ್ ನಲ್ಲಿದೆ.ಕಳೆದ ಸಾಲಿನ ಹಣ ಹಾಗು ವಿವಿಧ ಯೋಕನೆಗಳಿಗೆ ಸರತಕಾರ ನೀಡಿದ್ದ ಹಣ ಬಳಕೆಯಾಗದಿರುವುದು ಸೇರಿದರೆ ಹೆಚ್ಚು ಕಡಿಮೆ 2 ಸಾವಿರ ಕೋಟಿ ರೂ.ಗಳಷ್ಟು ಹಣ ಬ್ಯಾಂಕ್ ನಲ್ಲಿ ಉಳಿದಿರಲಿದೆ.ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲದ ಕಾರಣ ಬ್ಯಾಂಕ್ ನಲ್ಲೇ ಇದ್ದರೆ ಏನು ಉಪಯೋಗ ಎಂದು ಸಾಲಮನ್ನಾಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ.

ಇವರೊಂದಿಗೆ ಶಾಲೆಗಳ ಅಭಿವೃದ್ಧಿಗೆ ಎಸ್‌ಡಿಎಂಸಿ ಮೂಲಕ ನೀಡಿದ್ದ ಹಣದಲ್ಲಿಯೂ ದೊಡ್ಡ ಪ್ರಮಾಣದ ಹಣ ಬಾಕಿ ಇದ್ದು ಅದನ್ನೂ ಸಾಲಮನ್ನಾಗೆ ಹೊಂದಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ.ಬೆಂಗಳೂರಿನ ಕೆಲವೊಂದು ಸರ್ಕಾರಿ ಆಸ್ತಿ ಮಾರಾಟ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ವಿತ್ತ ಖಾತೆಯ ಹೊಣೆಯೊಂದಿಗೆ ಮುಖ್ಯಮಂತ್ರಿಯಾಗಿ ಸಿಎಂ ಎಚ್ಡಿಕೆ ಚೊಚ್ಚಲ ಬಜೆಟ್ ನಲ್ಲಿ ಸಾಲಮನ್ನಾ ಘೋಷಣೆ ಮಾಡುವ ಕಾರಣಕ್ಕೆ ಅಗತ್ಯ ಸಂಪನ್ಮೂಲ‌ ಕ್ರೂಢೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

- Call for authors -

LEAVE A REPLY

Please enter your comment!
Please enter your name here