ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ರಾಜ್ಯಪಾಲ ವಜೂಬಾಯಿ ವಾಲಾ ಮಾಹಿತಿ ಒದಗಿಸುತ್ತಿಲ್ಲ ಎಂದು ಆರೋಪಿಸಿ ರಾಷ್ಟ್ರಪತಿಗೆ ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಎಂಬವರು ದೂರು ನೀಡಿದ್ದಾರೆ.
ರಾಷ್ಟ್ರಪತಿಗೆ ಸಲ್ಲಿಸಿರುವ ತಮ್ಮ ದೂರಿನಲ್ಲಿ ನರಸಿಂಹ ಮೂರ್ತಿ, ಕರ್ನಾಟಕ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ನೀಡಲು ನಿರಾಕರಿಸುವ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆ ಮೂಲಕ ಅವರು ಅಧಿಕಾರ ದುರ್ಬಳಕೆ ಮತ್ತು ಆಡಳಿತ ಲೋಪ ಎಸಗುತ್ತಿದ್ದಾರೆ. ವಾಲಾ ಅವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಗಳನ್ನು ನೀಡುತ್ತಿಲ್ಲ. ಕಾಯ್ದೆ ಪ್ರಕಾರ ರಾಜ್ಯಪಾಲರ ಕಚೇರಿ ಸಾರ್ವಜನಿಕ ಕಚೇರಿಯಲ್ಲ ಎಂಬ ಕಾರಣ ಹೇಳಿ ಮಾಹಿತಿ ನಿರಾಕರಿಸಲಾಗುತ್ತಿದೆ. ಈ ಮುಂಚಿನ ರಾಜ್ಯಪಾಲರು ಆರ್ ಟಿ ಐಯಡಿ ಕೋರಿದ ಮಾಹಿತಿಯನ್ನು ನೀಡುತ್ತಿದ್ದರು. ಮಾಹಿತಿ ನಿರಾಕರಣೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಮಾಹಿತಿ ಕೋರಿದಾಗ, ರಾಜಭವನ ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತೋ ಇಲ್ಲವೋ ಎಂಬ ವಿಷಯ ಸುಪ್ರೀಂ ಕೊರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಹೀಗಾಗಿ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂಬ ಪ್ರತಿಕ್ರಿಯೆ ರಾಜಭವನದಿಂದ ಬರುತ್ತದೆ. ೨೦೧೮ರ ಜನವರಿಯಲ್ಲಿ ಈ ಸಂಬಂಧದ ಅರ್ಜಿಯನ್ನು ಸುಪ್ರೀಂ ಕೊರ್ಟ್ ಇತ್ಯರ್ಥಗೊಳಿಸಿದೆ. ಜತೆಗೆ, ಕಾಯ್ದೆ ಪ್ರಕಾರ ಸಂವಿಧಾನ ಸ್ಥಾಪಿತ ಎಲ್ಲ ಇಲಾಖೆಗಳು, ಸಂಸ್ಥೆಗಳು ಸಾರ್ವಜನಿಕ ಕಚೇರಿಗಳಾಗಿವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಹೀಗಿದ್ದರೂ ಮಾಹಿತಿ ನಿರಾಕರಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.










