ಬಿಎಸ್ವೈ ಮನೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು!

0
30

ಬೆಂಗಳೂರು: ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆ ಮುಂದೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಆಡಳಿತ ನಡೆಸಲು ಬಿಡದಿದ್ದರೆ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ನೀಡಲಾಗುವುದು ಎಂದು ಹಾಸದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ ತಕ್ಷಣ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಯಡಿಯೂರಪ್ಪ ನಿವಾಸದ ಬಳಿ ಆಗಮಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜೈಲು ನಾಯಕ, ಆಪರೇಷನ್ ಕಮಲ ರೂಪಾರಿ, ಅನೈತಿಕ ರಾಜಕಾರಣ ಮಾಡುತ್ತಿರುವ ರಾಜಕಾರಣಿ ಎಂದು ಬಿಎಸ್ವೈ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಶಾಸಕ ಎಂ.ಪಿ. ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಯಡಿಯೂರಪ್ಪ ನಿವಾಸದಿಂದ ಮುಖ್ಯ ರಸ್ತೆಯವರೆಗೆ ಶಾಸಕ ರೇಣುಕಾಚಾರ್ಯ ಮತ್ತು ವಿಶ್ವನಾಥ್ ತಳ್ಳಿಕೊಂಡು ಬಂದರು. ಇಷ್ಟೆಲ್ಲಾ ಘಟನೆಗಳು ನಡೆದರೂ ಪೊಲೀಸರು ಅಸಹಾಯಕರಾಗಿ ನಿಂತಿದ್ದರು.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಈ ಗಲಾಟೆಗೆ ಸಿಎಂ ಪ್ರಚೋದನೆ ನೀಡುತ್ತಿದ್ದಾರೆ. ನಾವೂ ಕೂಡ ತಾಯಿ ಹಾಲು ಕುಡಿದು ಬೆಳೆದ ಮಕ್ಕಳೇ. ನಮಗೂ ಹೇಗೆ ಉತ್ತರ ಕೊಡಬೇಕು ಎಂದು ಗೊತ್ತಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ದಂಗೆ ಏಳುವಂತೆ ಕುಮಾರಸ್ವಾಮಿ ಯವರು ಹೇಳಿಕೆ ಕೊಟ್ಟ ಕಾರಣದಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಇಂದು ಗಲಾಟೆ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಗಳೇ ನೈತಿಕ ಹೊಣೆ ಹೊತ್ತು ನೀವು ರಾಜಿನಾಮೆ ಕೊಡಬೇಕು ಒತ್ತಾಯಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮಾತನಾಡಿ, ಸಿಎಂ ಹೆಚ್.ಡಿ.ಕೆ. ಹೇಳಿಕೆಯ ಕುಮ್ಮಕ್ಕಿನಿಂದ ಯಡಿಯೂರಪ್ಪ ನಿವಾಸದ ಮೇಲೆ ಧಾಳಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಇದೆ ಸಾಕ್ಷಿ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ಸರ್ಕಾರವನ್ನು ವಜಾ ಮಾಡಬೇಕು. ಕುಮಾರಸ್ವಾಮಿ ಕ್ಷಮೆ ಕೇಳಬೇಕು‌. ತಮ್ಮ ಮಂತ್ರಿಗಳನ್ನೇ ಹತೋಟಿಯಲ್ಲಿ ಇಡಲಾಗದ ಮುಖ್ಯಮಂತ್ರಿ ಯಿಂದ ಬಿಜೆಪಿಯವರು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂವಿಧಾನಾಧತ್ತವಾಗಿ ರಾಜ್ಯದ ಜವಾಬ್ದಾರಿ ಹೊತ್ತಿರೋ ಸಿಎಂ ದಂಗೆ ಎಬ್ಬಿಸುವಂತೆ ಹೇಳಿಕೆ ನೀಡಿದ್ದಾರೆ. ಸಿಎಂ ಹಾಸನದಲ್ಲಿ ಹೇಳಿಕೆ ನೀಡುತ್ತಿದ್ದಂತೆ ಇಲ್ಲಿ ಕಾಂಗ್ರೆಸ್ ಜೆಡಿಎಸ್ ಗೂಂಡಾಗಳು ನುಗ್ಗುತ್ತಾರೆ ಅಂದ್ರೆ ಏನು ಆರ್ಥ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ, ಗುಪ್ತಾಚಾರ ಇಲಾಖೆ ಏನು ಮಾಡುತ್ತಿದೆ, ಪೊಲೀಸ್ ಕಮೀಷನರ್ ಈ ಕೂಡಲೇ ಸಿಎಂ ವಿರುದ್ಧ ದೂರು ದಾಖಲು ಮಾಡಬೇಕು. ರಾಜ್ಯದಲ್ಲಿ ಶಾಂತಿ ಕದಡುತ್ತಿರೋದು ಮುಖ್ಯಮಂತ್ರಿಗಳೇ. ಬಿಜೆಪಿ ಎಲ್ಲೂ ಶಾಂತಿ ಕದಡೋ ಪ್ರಯತ್ನ ಮಾಡಿಲ್ಲ. ಅವರ ಶಾಸಕರೇ ಈಗ ದಂಗೆ ಎದ್ದಿದ್ದಾರೆ. ಕಾಂಗ್ರೆಸ್ ಶಾಸಕರು ದಂಗೆ ಎದ್ದಿದ್ದಾರೆ. ನಾವು ಏನು ಮಾಡುತ್ತಿಲ್ಲ, ಬಿಜೆಪಿ ಮೇಲೆ ಆರೋಪ ಮಾಡುತ್ತಿರೋದು ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

- Call for authors -

LEAVE A REPLY

Please enter your comment!
Please enter your name here