ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣ: ಇನ್‍ಫೋಸಿಸ್ ಪ್ರತಿಷ್ಠಾನದೊಂದಿಗೆ ಒಡಂಬಡಿಕೆಗೆ ಸಹಿ

0
99

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಇನ್‍ಫೋಸಿಸ್ ಪ್ರತಿಷ್ಠಾನ 200 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದ್ದು, ಈ ಕುರಿತು ಬೆಂಗಳೂರು ಮೆಟ್ರೋ ನಿಗಮ ನಿಯಮಿತದೊಂದಿಗೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ನಮ್ಮ ಮೆಟ್ರೋ ಬೆಂಗಳೂರಿಗೆ ಅತ್ಯಾವಶ್ಯಕವಾಗಿದೆ. ಮೊದಲ ಹಂತದಲ್ಲಿ 47 ಕಿ.ಮೀ ಕಾರ್ಯ ಪೂರೈಸಿದೆ. 2 ನೇ ಹಂತದ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಕಾರ್ಯದಲ್ಲಿ ಇನ್‍ಫೋಸಿಸ್ ಪ್ರತಿಷ್ಠಾನ ಕೈಜೋಡಿಸಿರುವುದು ಶ್ಲಾಘನೀಯ ಎಂದರು. ಕೋನಪ್ಪ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನೂ ಮಾಡಲು ತೀರ್ಮಾನಿಸಿರುವುದು ಇನ್‍ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಡಾ: ಸುಧಾ ಮೂರ್ತಿಯವರ ಬದ್ಧತೆಯನ್ನು ತೋರುತ್ತದೆಯಲ್ಲದೆ ಈ ನೆಲದ ಬಗ್ಗೆ ಅವರಿಗಿರುವ ಅಭಿಮಾನವನ್ನೂ ಎತ್ತಿಹಿಡಿದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇನ್‍ಫೋಸಿಸ್ ಹಂತಹಂತವಾಗಿ ಬೆಳೆದು ರಾಜ್ಯದಿಂದ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಸಂಸ್ಥೆ. ಸಂಸ್ಥೆಯ ಲಾಭದ ಒಂದು ಭಾಗವನ್ನು ರಾಜ್ಯದ ಕ್ಯಾನ್ಸರ್ ಸಂಸ್ಥೆ, ಶಿಕ್ಷಣ ಕ್ಷೇತ್ರ ಮತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್‍ಫೋಸಿಸ್ ಪ್ರತಿಷ್ಠಾನದ ಮೂಲಕ ಕೈಗೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾಲು ದೊಡ್ಡದು. ಸರ್ಕಾರ ಇನ್‍ಫೋಸಿಸ್ ಪ್ರತಿಷ್ಠಾನದ ಕೊಡುಗೆಯ ಸದ್ಬಳಕೆ ಮಾಡಿಕೊಳ್ಳುತ್ತದೆ ಎಂದು ಭರವಸೆಯನ್ನಿತ್ತರು.

ಈ ಸಂದರ್ಭದಲ್ಲಿ ಮಾತನಾಡಿದ ಇನ್‍ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸುವುದು ಉಪಕಾರವಲ್ಲ ಬದಲಿಗೆ ನಮ್ಮ ತಾಯಿಗೆ ಮಾಡುವ ಕರ್ತವ್ಯ. ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮೆಟ್ರೋ ಮಹತ್ವದ ಪಾತ್ರ ವಹಿಸಿದೆ ಎಂದರು. ಜನರಿಗಾಗಿ ಮಾಡುವ ಕೆಲಸದಲ್ಲಿ ದೊರಕುವ ಆನಂದ ಮತ್ಯಾವುದರಲ್ಲಿಯೂ ದೊರಕುವುದಿಲ್ಲ. ವಿಶ್ವದ ಬಹುತೇಕ ನಗರಗಳಲ್ಲಿ ಸುತ್ತಾಡಿ ಬಂದರೂ ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ ಎಂಬಂತೆ ತಾಯಿ ನಾಡು ಕರ್ನಾಟಕ ನಮಗೆ ಅತ್ಯಂತ ಪ್ರಿಯವಾದದು ಎಂದರು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾವು ಮಾಡುತ್ತಿರುವುದು ಅಳಿಲು ಸೇವೆ ಎಂದರು.

ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಬೆಂಗಳೂರು ಏಷ್ಯಾ ಖಂಡದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಓಡಾಡುವುದು ಒಂದು ಸವಾಲಾಗಿರುವ ಇಂದಿನ ದಿನಗಳಲ್ಲಿ ನಮ್ಮ ಮೆಟ್ರೋ ವರದಾನವಾಗಿದೆ ಎಂದರು. ಮೆಟ್ರೋ 2 ನೇ ಹಂತದ ಕಾಮಗಾರಿಯಲ್ಲಿ ಪಾಲುದಾರರಾಗಿರುವ ಇನ್‍ಫೋಸಿಸ್ ಪ್ರತಿಷ್ಠಾನವನ್ನು ಅವರು ಅಭಿನಂದಿಸಿದರು.

- Call for authors -

LEAVE A REPLY

Please enter your comment!
Please enter your name here