ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಿಂದಲೇ ಸ್ಪರ್ಧೆ: ಡಿಕೆಶಿ

0
68

ಬೆಂಗಳೂರು: ಬೆಳಗಾವಿ, ಧಾರವಾಡ ಪಾಲಿಕೆ ಚುನಾವಣೆ ನಡೆಸಲು ನ್ಯಾಯಾಲಯ ಸಮಯ ನಿಗದಿ ಮಾಡಿದೆ. ಇನ್ನು ಮುಂದೆ ಯಾವುದೇ ಪಾಲಿಕೆ ಚುನಾವಣೆ ನಡೆದರು ನಮ್ಮ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಿ, ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಇಷ್ಟು ದಿನಗಳ ಕಾಲ ಬೆಳಗಾವಿ ಪಾಲಿಕೆಯಯಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ತನ್ನ ಅಭ್ಯರ್ಥಿ ಹಾಕುತ್ತಿರಲಿಲ್ಲ. ಈ ಬಾರಿಯಿಂದ ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಲಾಗುವುದು. ಎಲ್ಲ ವಾರ್ಡ್ ಮಟ್ಟದ ಸಮಿತಿ ಮಾಡಲು ಒಂದು ಸಮಿತಿ ರಚಿಸಲಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೋ, ಸೋಲುತ್ತೇವೋ ಅದು ನಂತರ. ನಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವುದು ಮುಖ್ಯ.

ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನಿಸಲಿ: ಸರ್ಕಾರ ಮಕ್ಕಳು ಮತ್ತು ಶಾಲೆ ವಿಚಾರದಲ್ಲಿ ಪ್ರತಿ ನಿಮಿಷವೂ ಗೊಂದಲದಲ್ಲಿದೆ. ನಮ್ಮ ಶಿಕ್ಷಣ ಸಚಿವರು ಸಿಎಂ, ಶಾಲೆ ಆಡಳಿತ ಮಂಡಳಿ, ಪೋಷಕರ ಜತೆ ಮಾತನಾಡುವುದಾಗಿ ಹೇಳುತ್ತಾರೆ. ಸರ್ಕಾರ ಮೊದಲು ಗೊಂದಲ ನಿವಾರಣೆ ಮಾಡಬೇಕು. ಇಷ್ಟು ದಿನ ಸಂಸ್ಥೆಗಳು ನಡೆಯುತ್ತಿರಲಿಲ್ಲ. ಶಿಕ್ಷಕರಿಗೂ ಸಂಬಳ ನೀಡಬೇಕು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ.

ಶಾಲೆ ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಬೇಕು.  ರಾಜಕಾರಣಿಗಳು ಏನೇ ಅಭಿಪ್ರಾಯ ಹೇಳಿದರೂ ಅಂತಿಮವಾಗಿ ವಿದ್ಯಾರ್ಥಿಗಳು, ಶಾಲೆಗಳು ಹಾಗೂ ಶಿಕ್ಷಕರ ಹಿತ ಹಾಗೂ ಭವಿಷ್ಯ ಕಾಯಬೇಕು. ನಾವು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಆ ತೀರ್ಮಾನದಲ್ಲಿ ಸ್ಪಷ್ಟತೆ ಇರಬೇಕು.

ಪೋಷಕನಾಗಿ, ಶಿಕ್ಷಣ ಸಂಸ್ಥೆಯ ಭಾಗವಾಗಿ ನನಗೂ ಆತಂಕಗಳಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಗೊಂದಲ ಇದೆ.

ಸರ್ಕಾರದಲ್ಲಿ ದೊಡ್ಡ ಅನುಭವವಿರುವ ಪಂಡಿತರಿದ್ದಾರೆ. ಅವರಿಗೆ ನಾನ್ಯಾಕೆ ಸಲಹೆ ನೀಡಲಿ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ.

ನಾವು ಯಾವುದೇ ಸಲಹೆ ಕೊಟ್ಟರೂ ಅದರ ವಿರುದ್ಧವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದೆ ಅದನ್ನು ನೋಡಿದ್ದೇವೆ. ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರಿಗೆ ಅವರದೇ ಆದ ವೈಯಕ್ತಿಕ ಅಜೆಂಡಾ ಇದೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಹೇಳುತ್ತಾರೆ. ರೈತರು ಹೋರಾಟ ಮಾಡಿದರೆ ಕಾಂಗ್ರೆಸ್ ನವರು ಎತ್ತಿಕಟ್ಟಿದ್ದಾರೆ ಅಂತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ನೆನೆಸಿಕೊಳ್ಳುತ್ತಿರಬೇಕು ನೆನೆಸಿಕೊಳ್ಳಲಿ ಬಿಡಿ.

- Call for authors -

LEAVE A REPLY

Please enter your comment!
Please enter your name here