ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಅಪಸ್ವರ, ಅಸಮಧಾನದ ನಡುವೆಯೂ ನಾಳೆ ನಡೆಯುತ್ತಿದೆ.
ಈಗಾಗಲೇ ಪೂರ್ವ ನಿಗದಿಯಂತೆ ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಒಟ್ಟಾರೆಯಾಗಿ 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ ಎಂದು ಉಭಯ ಪಕ್ಷಗಳ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ನಾಳೆ ನಗರಕ್ಕೆ ಆಗಮಿಸಲಿರುವ ರಾಜ್ಯಪಾಲ ವಜೂಭಾಯ್ ವಾಲಾ, ಸಂಪುಟದ ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಲಿದ್ದು, ಹಿರಿಯರ ಜೊತೆ ಕೆಲ ಹೊಸ ಮುಖಗಳಿಗೂ ಮೈತ್ರಿ ಸರ್ಕಾರದ ಸಂಪುಟದಲ್ಲಿ ಮಣೆ ಹಾಕಲಾಗುತ್ತದೆ, ಕಾಂಗ್ರೆಸ್ನ 16, ಜೆಡಿಎಸ್ನ 9 ಮಂದಿ ಸಚಿವರಾಗಲಿದ್ದು, ಇವರಿಗೆ ನಾಳೆ ಸಂಜೆ ವೇಳೆಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಜೆಡಿಎಸ್ ವರಿಷ್ಠ ಹಾಗು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ರಾತ್ರಿ ಗೌಡರ ನಿವಾಸದಲ್ಲಿ ಸಮಾಲೋಚನೆ ಮಾಡಿ, ತಮ್ಮ ಪಕ್ಷದ ವತಿಯಿಂದ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪಟ್ಟಿ ಅಂತಿಮಗೊಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಸಂಜೆವರೆಗೂ ಗೊಂದಲ ಮುಂದುವರೆದಿದ್ದು, 16 ಸಚಿವ ಸ್ಥಾನಕ್ಕೆ 56 ಮಂದಿ ಆಕಾಂಕ್ಷಿಗಳಿದ್ದು, ಪೈಪೋಟಿ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುಲಾಂ ನಬೀ ಅಜಾದ್ ರೊಂದಿಗೆ ಸಮಾಲೋಚನೆ ನಡೆಸಿದ್ದು, ಆ ನಂತರ ಪ್ರದೇಶ ಕಾಂಗ್ರೆಸ್ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಉಭಯ ಪಕ್ಷಗಳಲ್ಲೂ ಹಲವು ಸಚಿವಾಕಾಂಕ್ಷಿಗಳು ಮಂತ್ರಿಮಂಡಲ ಸೇರಲು ಕಳೆದ ಮೂರು ದಿನಗಳಿಂದ ಭಾರಿ ಕಸರತ್ತು ನಡೆಸಿದ್ದು ಪ್ರಮುಖವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪಾತ್ರ ಏನು ಎನ್ನುವುದು ಇನ್ನೂ ನಿಗೂಢವಾಗಿದೆ.









