ರಾಮನಗರ: ಕೋವಿಡ್ 19 ಹಿನ್ನೆಲೆಯಲ್ಲಿ ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕು ಆಸ್ಪತ್ರೆಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಂತಹ ಪರಿಸ್ಥಿತಿ ಎದುರಾದರೂ ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅವರು, ತಾಲ್ಲೂಕು ವೈದ್ಯರ ಜತೆ ಚರ್ಚೆ ನಡೆಸಿದರಲ್ಲದೆ, ಅವರ ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಆದರೂ, ಎಚ್ಚರ ತಪ್ಪಬಾರದು ಎಂದು ಖಡಕ್ಕಾಗಿ ಸೂಚಿದರು. ಇದೇ ವೇಳೆ ವೈದ್ಯರು, ನರ್ಸ್ ಗಳು, ಪೂರಕ ಸಿಬ್ಬಂದಿ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಉಳಿದಂತೆ, ಗಂಟಲು ದ್ರವ ಸಂಗ್ರಹ, ಆಂಬುಲೆನ್ಸ್ ಗಳು, ಔಷಧಿ, ಫೀವರ್ ಕ್ಲಿನಿಕ್ಕುಗಳು ಮುಂತಾದ ಅಂಶಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಅವರು, ಜಿಲ್ಲೆಯಲ್ಲಿ ಕೋವಿಡ್ ಎದುರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಾಸಿಟೀವ್ ಬಂದಿರುವ ರೋಗಿಗಳಿಗೆ ಚನ್ನಪಟ್ಟಣ, ಮಾಗಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗದು. ಅವರನ್ನು ರಾಮನಗರ ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜ್, ದಯಾನಂದ ಸಾಗರ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲ್ಲಿ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
500 ಜನರಿಗೆ ಚಿಕಿತ್ಸೆ:
ಇಲ್ಲಿ500 ಜನರಿಗಾಗುವಷ್ಟು ಕೋವಿಡ್ ಕೇರ್ ಅನ್ನು ಪ್ರಾರಂಭಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ . ಜಿಲ್ಲೆಯಲ್ಲಿ ಎಷ್ಟೇ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೂ ಅದನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚನ್ನಪಟ್ಟಣ ಆಸ್ಪತ್ರೆ ಉನ್ನತ ದರ್ಜೆಗೆ:
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ದರ್ಜೆಗೆ ಏರಿಸಲಾಗುವುದು. ಈ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ:
ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ನ ಚಿಕಿತ್ಸೆಗಾಗಿ ಇಂತಿಷ್ಟೆ ಪ್ರಮಾಣದ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ರೋಗಿಗಳನ್ನು ದಾಬಲಿಸಲಾಗುವುದು. ಸ್ಥಳೀಯ ಆಡಳಿತದ ವತಿಯಿಂದ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಲಾಗುವುದರ ಜೊತೆಗೆ, ಬಡವರು ಶ್ರೀಮಂತರು ಎನ್ನದೆ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಎಲ್ಲರಿಗೂ ಚಿಕಿತ್ಸೆ:
ಖಾಸಗಿ ಆಸ್ಪತ್ರೆಗೆ ದಾಖಲಾಗುವವರು ಅವರೇ ಆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕಾಗುತ್ತದೆ. ಸರ್ಕಾರದ ಮೀಸಲು ಖೋಟಾದ ಹಾಸಿಗೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಯ ವೆಚ್ಚದ ಹಾಸಿಗೆಗಳನ್ನು ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅದರ ವೆಚ್ಚವನ್ನು ಸಂಬಂಧಿಸಿದ ರೋಗಿಯೇ ಭರಿಸಬೇಕಾಗುತ್ತದೆ. ಎಲ್ಲರಿಗೂ ಚಿಕಿತ್ಸೆ ದೊರೆಯಬೇಕು ಅನ್ನುವ ಸದುದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಮನೆಯಲ್ಲೇ ಚಿಕಿತ್ಸೆ:
ಕೋವಿಡ್-19ರ ರೋಗ ಲಕ್ಷಣವಿಲ್ಲದವರಿಗೆ ಆಸ್ಪತ್ರೆಯ ಬದಲು ಮನೆಯಲ್ಲೇ ಚಿಕಿತ್ಸೆ ನೀಡಲು ನಿಯಮ ರೂಪಿಸಲಾಗಿದೆ. ಮನೆಯಲ್ಲಿಯೇ ಸೌಲಭ್ಯಗಳಿದ್ದರೆ ಇಂತಹವರು ಅವರ ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದು. ಸದ್ಯಕ್ಕೆ ಕೋವಿಡ್-19 ನಿಯಂತ್ರಣದಲ್ಲಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಭಯಪಡುವ ಅಗತ್ಯವಿಲ್ಲ. ಕೋವಿಡ್ ಅನ್ನು ನಿಯಂತ್ರಿಸಲು ಸರ್ಕಾರ ಅಗತ್ಯವಿರುವ ಕ್ರಮ ಕೈಗೊಂಡಿದೆ. ಹಾಗೆಯೇ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ಪರೀಕ್ಷಾ ಸಂಖ್ಯೆ ಹೆಚ್ಚಳ:
ಶಂಕೆ ಇರುವವರಿಗೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ವಿದೇಶದಿಂದ ಬಂದವರು, ಹೊರರಾಜ್ಯದಿಂದ ಬಂದವರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋವಿಡ್ ಮಾದರಿಗಳ ಪರೀಕ್ಷೆಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.
ಡಿಸಿಎಂ ಜತೆ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತಿ ಸಿಇಓ ಇಕ್ರಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು. ಮಾಗಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಅ. ದೆವೇಗೌಡ ಜತೆಯಲ್ಲಿದ್ದರು.
ಯೋಗೀಶ್ವರ್ ಮನೆಗೆ ಭೇಟಿ:
ಚನ್ನಪಟ್ಟಣ ಭೇಟಿಯ ವೇಳೆ ಡಿಸಿಎಂ ಅವರು ಬಿಜೆಪಿ ಹಿರಿಯ ಮುಖಂಡ ಸಿ.ಪಿ. ಯೋಗೀಶ್ವರ್ ಅವರ ಮನೆಗೆ ಭೇಟಿ ನೀಡಿದರಲ್ಲದೆ, ಅವರ ತಂದೆಯ ಯೋಗಕ್ಷೇಮ ವಿಚಾರಿಸಿದರು.









