ತುಮಕೂರು: ಚಿಕ್ಕನಾಯಕನಹಳ್ಳಿ ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುವ ರೀತಿಯಲ್ಲಿ ರಣನೀತಿ ರೂಪಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆನೀಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವ ಶಕ್ತಿಯಿಂದಲೇ ಚುನಾವಣೆ ಎದುರಿಸಲು ಹೊರಟಿದ್ದೇವೆ. ೩೫ ವರ್ಷದ ಹಿಂದೆ ಕಾಂಗ್ರೆಸ್ ಈ ಭಾಗದಲ್ಲಿ ಅಧಿಕಾರಕ್ಕೆ ಏರಿದ್ದು ಬಿಟ್ಟರೆ ಈ ವರೆಗು ಮುನಿಸಿಪಾಲಿಟಿ ಅಧಿಕಾರ ಹಿಡಿದಿದ್ದು. ಬಹಳ ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಚುನಾವಣಾ ರಣತಂತ್ರ ರೂಪಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು. ನಿಮ್ಮ ಎಲ್ಲ ಬೇಡಿಕೆಯನ್ನು ಸರಕಾರದಿಂದ ಪೂರೈಸಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಗೆಲ್ಲುವವರಿಗೆ ಟಿಕೆಟ್ ನೀಡುವುದು ಮುಖ್ಯ. ಮುಲಾಜಿಲ್ಲದೇ ಗೆಲ್ಲುವವರಿಗೆ ಮಾತ್ರ ಟಿಕೆಟ್ ನೀಡಿ ಎಂದು ಹೇಳಿದರು.
ರಾಜ್ಯದ ಹಿತದೃಷ್ಟಿಯಿಂದ ಈ ಬಾರಿ ಸಮ್ಮಿಶ್ರ ಸರಕಾರ ರಚಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿದೆ. ಇಂಥವರಿಗೆ ಅಧಿಕಾರ ನೀಡಬಾರದು ಎಂಬ ಕಾರಣಕ್ಕೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ.
ಹಿಂದಿನ ಸರಕಾರ ಘೋಷಿಸಿದ ಕಾರ್ಯಕ್ರಮ ಮುಂದುವರೆಸುವ ಷರತ್ತಿನೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದೆವು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಜಯಚಂದ್ರ ಇದ್ದರು.









