ದೇವೇಗೌಡರು ಮಗನ ಕಿವಿ ಹಿಂಡಿ ಬುದ್ಧಿ ಹೇಳುವ ಬದಲು ನನ್ನ ಬಗ್ಗೆ ಟೀಕೆ ಮಾಡುತ್ತಾರೆ: ಬಿಎಸ್ವೈ ವ್ಯಂಗ್ಯ

0
78

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ, ಅವರು ತಮ್ಮ ಮಗ ಕುಮಾರಸ್ವಾಮಿಗೆ ಕಿವಿ ಹಿಂಡಿ ಬುದ್ದಿ ಹೇಳದೆ ನನ್ನ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಅವರಿಗೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಮೂರು ಪ್ರಶ್ನೆ ಕೇಳಿದ್ದೇನೆ. ಈ ಪ್ರಶ್ನೆಗಳಿಗೆ ಕುಮಾರಸ್ವಾಮಿ ಯವರಾಗಲೀ ದೇವೇಗೌಡರಾಗಲೀ ಉತ್ತರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.

ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಕಾರ್ಯಕಾರಿಣಿ ಸಭೆಗೆ ಮುನ್ನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬೆಳಗಾವಿಯಲ್ಲಿ ಸ್ವಾಮೀಜಿಗಳು ಪ್ರತಿಭಟನೆ ಮಾಡುತ್ತಿದ್ದಾಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಲ್ಲಿಗೆ ಹೋಗಿ ಮನವೊಲಿಸಬೇಕಿತ್ತು. ಆದರೆ, ಪ್ರತಿಪಕ್ಷ ನಾಯಕನಾಗಿ ನಾನು ಅಲ್ಲಿಗೆ ಹೋಗಿ ರಾಜ್ಯ ಒಡೆಯದಂತೆ ಮನವಿ ಮಾಡಿದೆ. ಆದರೆ, ಅದಕ್ಕೆ ಪ್ರತಿಯಾಗಿ ನನ್ನನ್ನೇ ಟೀಕೆ ಮಾಡಿದ್ರು ಎಂದರು.

ಬೆಂಗಳೂರು ಮಹಾನಗರದ ಜನತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಜೆಪಿಯ ಬೆಂಗಳೂರಿನ ಶಾಸಕರು ಬಿಬಿಎಂಪಿ ಕಾರ್ಪೋರೇಟರ್ ಗಳು ಹೋರಾಟ ಹಮ್ಮಿಕೊಳ್ಳಬೇಕು. ಒತ್ತುವರಿಯಾಗುತ್ತಿರುವ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡಬೇಕು ಎಂದು ಕರೆ ನೀಡಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಆದ ಹಿನ್ನಡೆ ಮರುಕಳಿಸಬಾರದು. ಬೆಂಗಳೂರಿನ ಶಾಸಕರು, ಬಿಬಿಎಂಪಿ ಸದಸ್ಯರು ಏನು ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಅವರ ಕೊಡುಗೆ ಏನು ಎಂಬುದು ಚರ್ಚೆಯಾಗಬೇಕು. ಪಕ್ಷ ಸಂಘಟನೆಗೆ ಕೆಲಸ ಮಾಡದ ಬಿಬಿಎಂಪಿ ಸದಸ್ಯರಿಗೆ ಯಾವುದೇ ಕಾರಣಕ್ಕೂ ಮತ್ತೆ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

- Call for authors -

LEAVE A REPLY

Please enter your comment!
Please enter your name here