ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತುಕ್ರಮ: ಬಂಡೆಪ್ಪ ಖಾಶೆಂಪೂರ

0
9

ಬೀದರ್: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಪ್ಲಾನ್ ತಯಾರಿಸುವ‌ ವಿಷಯದಲ್ಲಿ ಬಹುತೇಕ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಕೆಲವು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ.೨ ರಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಸಭೆಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಕೈಗಾರಿಕಾ ವಲಯಗಳನ್ನು ಆದ್ಯತಾ ವಲಯ ಎಂದು ಗುರುತಿಸಿ, ಇಲ್ಲಿನ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಈ ಕ್ಷೇತ್ರಗಳಲ್ಲಿ ನೀವು ಮಾಡಿದ್ದೇನು? ಮಾಡಬೇಕಿರುವುದೇನು? ಎಂಬುದರ ಬಗ್ಗೆ ಒಂದು ಪ್ರಸ್ತಾವನೆ ತಯಾರಿಸಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ,
ಯಾವ ಅಧಿಕಾರಿಗಳು ಕೂಡ ಇಲ್ಲಿವರೆಗೆ ತಮ್ಮನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿಲ್ಲ. ಯಾರು ಕೂಡ ಇದುವರೆಗೆ ವರದಿ ನೀಡಿಲ್ಲ. ಅಧಿಕಾರಿಗಳ ಈ ಕಾರ್ಯವೈಖರಿ ಸರಿಯಲ್ಲ. ವರದಿ ಕೇಳಲು ನಿಮ್ಮನ್ನು ಇಲ್ಲಿಗೆ ಕರೆದಿಲ್ಲ. ಕೆಡಿಪಿ ಅಥವಾ ಇನ್ನೀತರ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ ಸೂಚನೆಗಳಿಗೆ ಬೆಲೆ ಇಲ್ಲವೇ? ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹೇಳಿದ ಕೆಲಸವನ್ನು ಮಾಡುವಲ್ಲಿ ಆಸಕ್ತಿ ತೋರದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ತಿಳಿಸಿದರು.

ಐದು ಆದ್ಯತಾ ವಲಯಗಳಲ್ಲಿ ಬದಲಾವಣೆ ಎದ್ದು ಕಾಣುವ ನಿಟ್ಟಿನಲ್ಲಿ ಕೆಲಸ ನಡೆಯಲು ಯೋಜನೆ ರೂಪಿಸಲು ತಿಳಿಸಲಾಗಿತ್ತು. ಎಚ್ಕೆಆರ್ಡಿಬಿನಲ್ಲಿ ಅನುದಾನ ಇದೆ. ಹಣಕ್ಕೆ ಕೊರತೆ ಇಲ್ಲ ಎಂದು ಕೂಡ ಹೇಳಲಾಗಿತ್ತು ಎಂದು ಸಚಿವರು ಮತ್ತೊಮ್ಮೆ ಅಧಿಕಾರಿಗಳಿಗೆ ನೆನಪಿಸಿದರು.

*ಹಣ ತರಲು ಸಿದ್ಧ* : ಜಿಲ್ಲೆಗೆ ಹೆಚ್ಚಿನ ಅನುದಾನ ತರಲು ನಾನು ಈಗಲೂ ಸಿದ್ದನಿದ್ದೇನೆ. ವಿಶೇಷ ಪ್ಯಾಕೇಜ್ ನೀಡಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಐದು ವಲಯಗಳಲ್ಲಿ
ಏನು ಮಾಡಬಹುದು ಎಂಬುದರ ಬಗ್ಗೆ ಆಯಾ ಇಲಾಖಾಧಿಕಾರಿಗಳು ಇನ್ನಾದರೂ ಪ್ರಸ್ತಾವನೆ ತಯಾರಿಸಿ ಕೂಡಲೇ ಸಲ್ಲಿಸಬೇಕು ಎಂದು ತಿಳಿಸಿದರು.
207 ಕೋಣೆಗಳನ್ನು ಡೆಮಾಲಿಸ್ ಮಾಡಲಾಗಿದೆ. ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅವರಿಗೆ ವಿಶೇಷ ತರಗತಿ ನಡೆಸಲು ಯೋಜಿಸಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಈ ಹಿಂದೆ ತಿಳಿಸಿದ ಕೆಲಸವನ್ನೇಕೆ ಮಾಡಿಲ್ಲ ಎಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ಪ್ರಶ್ನಿಸಿದರು.ಕೂಡಲೇ ಕ್ರಿಯಾಯೋಜನೆ ರೂಪಿಸಿ. ಅದನ್ನು ತಮ್ಮ ಬಳಿ ತಂದು ವಿವರಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

*ವ್ಯಾಪಕ ಅರಿವು ಮೂಡಿಸಿ* : ವಿಪರೀತ ಹೆಚ್ಚುತ್ತಿರುವ ಡೆಂಗೆ ಮತ್ತು ಎಚ್1ಎನ್1 ತಡೆಗೆ ಕಾರ್ಯಕ್ರಮ ರೂಪಿಸಬೇಕು. ಪ್ರತಿಯೊಂದು ಹಳ್ಳಿನಲ್ಲಿ ಕರಪತ್ರ ವಿತರಣೆಯಂತಹ ಜಾಗೃತಿ ಕಾರ್ಯಕ್ರಮಗಳಾಗಬೇಕು ಎಂದು ಸಚಿವರು ಡಿಎಚ್ಒ ಅವರಿಗೆ ಸೂಚಿಸಿದರು. ಟಿವಿ‌ವಾಹಿನಿಯಲ್ಲಿ ವಾರ್ತಾ ಇಲಾಖೆಯ ಮೂಲಕ ಪ್ರಚಾರ ನಡೆಸಲು ಪ್ರಸ್ತಾವನೆಯನ್ನು ಸಲ್ಲಿಸಿ ಕ್ರಮವಹಿಸಿ ಎಂದು ವಾರ್ತಾಧಿಕಾರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
*ತಿಂಗಳ ಗಡುವು* : 6 ತಿಂಗಳ ಬಳಿಕ ಯಾವುದಾದರೂ ಒಂದು ಕೇಸ್ ಬೇರೆಡೆ ಹೋದರೆ ತಮ್ಮ ಮೇಲೆ ಕ್ರಮ ಜರುಗಿಸುತ್ತೇನೆ. ಹೀಗಾಗಿ ನೀವು ಆಸ್ಪತ್ರೆ ಸುಧಾರಣೆಗೆ ಹೆಚ್ಚಿನ ಗಮನ ಕೊಡಿ. ತಿಂಗಳೊಳಗೆ ಶೆ.80 ರಷ್ಟು ಸುಧಾರಣೆ ಅಲ್ಲಿ ಕಾಣಬೇಕು ಎಂದು ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
*ಬರ ಪರಿಹಾರ ಕಾರ್ಯ* :
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಇಲ್ಲಿ ಪರಿಹಾರ ಕಾರ್ಯ ತೀವ್ರ ರೀತಿಯಲ್ಲಿ ನಡೆಯಲಿ ಎಂದು ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಪಂ ಸಿಇಓ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

- Call for authors -

LEAVE A REPLY

Please enter your comment!
Please enter your name here