ಕೆಎಂಎಫ್‌ನಲ್ಲಿ ಏನಾಗ್ತಿದೆ ಗೊತ್ತಾ?

0
243

ಬೆಂಗಳೂರು: ಕೆಎಂಎಫ್ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ. ವರ್ಷಕ್ಕೆ 96 ಲಕ್ಷ ರೂಪಾಯಿ ವೇತನ ನೀಡಿ ಕನ್ಸಲ್ಟೆಂಟ್ ನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲೂ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಘೋಷಿಸಿದ ನಂತರ ಕೆಎಂಎಫ್ ನಲ್ಲಿ ಲೆಕ್ಕ ಜವಾಬ್ದಾರಿಯೇ ಇಲ್ಲದಂತಾಗಿದೆ. ಸರ್ಕಾರದ ಸಬ್ಸಿಡಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಮಾಧುಸ್ವಾಮಿ ಆರೋಪಿಸಿದರು.

ಕೆಎಂಎಫ್ ಅಕ್ರಮಗಳ ಬಗ್ಗೆ ಬಿಜೆಪಿಯ ಮಾಧುಸ್ವಾಮಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ನೂತನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಹಾಲು ಉತ್ಪಾದಕರಿಗೆ ಕೊಡುತ್ತಿರುವ ಐದು ರೂಪಾಯಿ ಸಬ್ಸಿಡಿಯಲ್ಲ. ಅದು ಪ್ರೋತ್ಸಾಹ ಧನ. ಇದರಿಂದ ಹಾಲು ಉತ್ಪಾದನೆ ಪ್ರಮಾಣ 75ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ. ರೈತರ ಉತ್ಪಾದನೆಗೆ ಸರಿಯಾದ ದರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಾಗೆಂದು ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ. ಕೆಎಂಎಫ್ ನಷ್ಟದಲ್ಲಿದ್ದು, ನಷ್ಟ ಸರಿದೂಗಿಸಲು ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನ ಉಚಿತ ಹಾಲು ವಿತರಣೆ ಯೋಜನೆ ಆರಂಭಿಸಲಾಯ್ತು ಎಂದರು.

ಬಿಜೆಪಿಯ ಸೋಮಶೇಖರ ರೆಡ್ಡಿ ಮಾತನಾಡಿ, ಕೆಎಂಎಫ್ ನ ಹಾಲು ಉತ್ಪಾದಕರ ಸಬ್ಸಿಡಿ ಹಣ ದುರುಪಯೋಗವಾಗಿಲ್ಲ. ಮಧ್ಯವರ್ತಿಗಳ ಪಾಲಾಗಿಲ್ಲ. ಸಬ್ಸಿಡಿ ಹಣ ನೇರವಾಗಿ ಹಾಲು ಉತ್ಪಾದಕರ ಅಕೌಂಟ್ ಗೆ ಹೋಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ರೈತರಿಗೆ ಕೊಡುತ್ತಿರುವ ಹಣವನ್ನು ಸಬ್ಸಿಡಿ ಎಂದು ಬಳಸಬೇಡಿ. ಅದನ್ನು ಪ್ರೋತ್ಸಾಹ ಧನ ಎಂದೇ ಪರಿಗಣಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಸಲಹೆ ನೀಡಿದರು.

ಮಾಧುಸ್ವಾಮಿ ಆರೋಪಕ್ಕೆ ಸಮರ್ಥನೆ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ.ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು.

- Call for authors -

LEAVE A REPLY

Please enter your comment!
Please enter your name here