ಬೆಂಗಳೂರು: ಪ್ರತಿದಿನ ಬೆಂಗಳೂರಿಗೆ ಅಕ್ರಮ ಬಾಂಗ್ಲಾ ವಲಸಿಗರು ಬಂದಿಳಿಯುತ್ತಿದ್ದಾರೆ. ಅವರಿಗೆಲ್ಲಾ ಓಟರ್ ಐಡಿ ಕೊಟ್ಟು ಪಶ್ಚಿಮ ಬಂಗಾಳದವರು ಎಂದು ಬಿಂಬಿಸಲಾಗುತ್ತಿದೆ. ಮುಂದೊಂದು ದಿನ ಅಸ್ಸಾಂಗೆ ಆದ ಪರಿಸ್ಥಿತಿಯೇ ಬೆಂಗಳೂರಿಗೂ ಆಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್,
ಮುಂದೊಂದು ದಿನ ನಮ್ಮೆಲ್ಲಾ ಆಸ್ತಿಪಾಸ್ತಿ ಬಾಂಗ್ಲಾ ವಲಸಿಗರ ಪಾಲಾಗುತ್ತವೆ. ಬೆಂಗಳೂರಿನ ಡ್ರಗ್ ಮಾಫಿಯಾದಲ್ಲಿ ಇರುವವರೆಲ್ಲಾ ಅಕ್ರಮ ಬಾಂಗ್ಲಾ ವಲಸಿಗರು ಮತ್ತು ನೈಜೀರಿಯಾದವರು. ಈಗ ನಾವು ಇದರ ವಿರುದ್ದ ದೊಡ್ಡ ಹೋರಾಟ ರೂಪಿಸಬೇಕಾಗಿದೆ. ಕಾರ್ಪೋರೇಟರ್‌ಗಳು ನಮ್ಮ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಡ್ರಗ್ ಮಾಫಿಯಾ ಮಿತಿ ಮೀರಿದೆ. ಶಾಲಾ ಕಾಲೇಜುಗಳಲ್ಲಿ ಹಾಗೂ ಬೀದಿ ಬೀದಿಗಳಲ್ಲಿ ತರಕಾರಿ ಸಿಗುವಂತೆ ಡ್ರಗ್ ಮಾರಾಟವಾಗುತ್ತಿದೆ. ಈ ಸಂಬಂಧ ನಾವು ಸೋಮವಾರ ಪೊಲೀಸ್ ಕಮೀಷನರ್ ರನ್ನು ಭೇಟಿ ಮಾಡಿ ಡ್ರಗ್ ಮಾಫಿಯಾ ವಿರುದ್ದ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದರು.
ಈಗ ಅಕ್ರಮ ಬಾಂಗ್ಲಾ ವಲಸಿಗರು ದೇಶದಲ್ಲಿ ಇದ್ರೆ ಏನು ತಪ್ಪು ಎಂದು ಕೇಳುತ್ತಿರುವ ಮಮತಾ ಬ್ಯಾನರ್ಜಿ ಮುಂದೆ ಪಾಕಿಸ್ತಾನೀಯರು, ಐಎಸ್ ಐಎಸ್ ನವರು ಭಾರತದಲ್ಲಿ ಇದ್ರೆ ಏನು ತಪ್ಪು ಎಂದು ಕೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ದೀವಾಳಿಯಾಗಿದೆ. ಬೆಂಗಳೂರಿಗೆ ಕೊಟ್ಟ ಅನುದಾನಗಳೆಲ್ಲವನ್ನು ವಾಪಸ್ ಪಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬೆಂಗಳೂರಿಗೆ ಎಲಿವೇಟೆಡ್ ಕಾರಿಡಾರ್ ಘೋಷಣೆ ಮಾಡಿದ್ರು.16,000 ಕೋಟಿಯ ಈ ಪ್ರಾಜೆಕ್ಟ್ ಗೆ ಬಜೆಟ್ ನಲ್ಲಿ ಕೇವಲ 1000 ಕೋಟಿ ಇಟ್ಟಿದ್ದಾರೆ. ಅದೂ ಕೂಡ ಯಾರೋ ವಿರೋಧ ಮಾಡ್ತಾರೆ ಎಂದು ಯೋಜನೆಯನ್ನು ಕೈ ಬಿಡಲು ಹೊರಟಿದ್ದಾರೆ. ಕಸದ ಮಾಫಿಯಾ ಮಿತಿ ಮೀರಿದೆ ಎಂದು ಹೇಳಿದರು.









