ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಈ ವರ್ಷವೂ ಮಳೆಯ ಅಬ್ಬರ ಶುರುವಾಗಿದೆ. ಕಳೆದ ಎರಡು, ಮೂರು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಇನ್ನೂ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮಗಳು ಮಳೆಯ ಅಬ್ಬರಕ್ಕೆ ನಲುಗಿ ಹೋಗಿವೆ. ಧಾರಾಕಾರ ಮಳೆಗೆ ಶೂರ್ಪಾಲಿ ಗ್ರಾಮದ ತೋಟದ ಮನೆಗಳಿಗೆ ನೀರು ನುಗ್ಗಿದೆ. ಪುನರ್ ವಸತಿ ಕೇಂದ್ರದ ಸಮೀಪದ ಮನೆಗಳಿಗೂ ನೀರು ಬಂದಿದೆ.
ಮನೆ ಸುತ್ತ ಎರಡ್ಮೂರು ಅಡಿ ಮಳೆ ನೀರು ಆವರಿಸಿಕೊಂಡಿದೆ. ಹೀಗಾಗಿ ಜನರು ನಡು ನೀರಲ್ಲಿ ನಿಂತಿದ್ದಾರೆ. ಇನ್ನೂ ಹೊಲಗಳಿಗೂ ಮಳೆ ನೀರು ನುಗ್ಗಿದೆ. ಮನೆಗಳಲ್ಲದೇ ಬೆಳೆಗಳೂ ಸಹ ಜಲಾವೃತವಾಗಿವೆ. ಜೊತೆಗೆ ತುಬಚಿ, ಬ್ಯಾಡಗಿ ಕ್ರಾಸ್ ರಸ್ತೆ ಮೇಲೆ ನೀರು ಹರಿಯುತ್ತಿರುವ ಕಾರಣ ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಹೈರಾಣಾಗಿದ್ದು, ಕಳೆದ ವರ್ಷದ ಕೃಷ್ಣಾ ಪ್ರವಾಹ ಮಾಸುವ ಮುನ್ನವೇ ಈಗ ಮತ್ತೆ ಮನೆ, ಬೆಳೆ ಜಲಾವೃತ ಆಗ್ತಿರೋದು ಜನರಲ್ಲಿ ಆತಂಕ ತಂದೊಡ್ಡಿದೆ.








