ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ಸಚಿವ ಡಾ.ಕೆ.ಸುಧಾಕರ್

0
2

ಚಿಕ್ಕಬಳ್ಳಾಪುರ, ಆಗಸ್ಟ್ 7,ಚಿಕ್ಕಬಳ್ಳಾಪುರದ ಗಡಿಭಾಗದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಆಂಧ್ರಪ್ರದೇಶದಿಂದ ನೀರು ಪಡೆಯುವ ಕುರಿತು ಚರ್ಚೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 7.29 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಚಿಕ್ಕಬಳ್ಳಾಪುರ ತಾಲೂಕಿನ ನೀರಿನ ಸಮಸ್ಯೆ ಪರಿಹರಿಸಲು ಎಚ್ ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದೆ. ಗೌರಿಬಿದನೂರಿಗೂ ಈ ನೀರು ಸಿಗಲಿದೆ. ಎತ್ತಿನಹೊಳೆ ಯೋಜನೆಯಿಂದಲೂ ಈ ಭಾಗಗಳಿಗೆ ನೀರು ನೀಡುವ ಪ್ರಯತ್ನ ನಡೆದಿದೆ. ಇದರ ಜೊತೆಗೆ ಆಂಧ್ರಪ್ರದೇಶದಿಂದ 5 ರಿಂದ 10 ಟಿಎಂಸಿ ನೀರು ಪಡೆಯುವ ಬಗ್ಗೆ ಚರ್ಚೆಯಾಗಿದೆ. ಜಲಸಂಪನ್ಮೂಲ ಸಚಿವರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ,’’ ಎಂದು ತಿಳಿಸಿದರು.

“ಆಂಧ್ರದಿಂದ ಇಲ್ಲಿನ ಗಡಿಭಾಗಗಳಿಗೆ ನೀರು ಪಡೆದು, ಬೇರೆ ಮೂಲಗಳಿಂದ ಅಷ್ಟೇ ನೀರನ್ನು ಆಂಧ್ರಕ್ಕೆ ನೀಡುವ ಕುರಿತು ಚರ್ಚೆಯಾಗಿದೆ. ಶೀಘ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು,’’ ಎಂದರು.

“ಗೌರಿಬಿದನೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾದಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದೆ. ಚಿಕ್ಕಬಳ್ಳಾಪುರವನ್ನು ಕೂಡ ‘ಹಂತ 2’ ವರ್ಗದಲ್ಲಿ ಸೇರ್ಪಡೆಗೊಳಿಸಿದರೆ ಕೈಗಾರಿಕೆ ಅಭಿವೃದ್ಧಿ ಸುಲಭವಾಗಲಿದೆ. ಜೊತೆಗೆ ಉದ್ಯಮಿಗಳಿಗೆ ಹಲವು ಬಗೆಯ ರಿಯಾಯಿತಿ ದೊರೆಯಲಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ,’’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಆಶ್ರಯ ಯೋಜನೆಯಡಿಯ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಯಿತು.

ಶಾಸಕ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಉಪಸ್ಥಿತರಿದ್ದರು.

ಇತರೆ ಅಂಶಗಳು:

*17 ಜಿಲ್ಲೆಗಳಲ್ಲಿ ಭಾರಿ‌ ಮಳೆ ಸುರಿಯುತ್ತಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದರೂ ಮಳೆಹಾನಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ನಮ್ಮ‌ ಸರ್ಕಾರ ವಿಕೋಪದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

*ಚಿಕ್ಕಬಳ್ಳಾಪುರದಲ್ಲಿ ವಿದುರಾಶ್ವತ್ಥ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ.

*ಕೊರೊನಾ ನಿಯಂತ್ರಣಕ್ಕೆ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಬೇಕು.

*ಶೇ.98 ರಷ್ಟು ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಕೊರೊನಾ ಬಂದರೆ ಸಾವೇ ಗತಿ ಎಂಬ ತಪ್ಪು ಕಲ್ಪನೆ ಬೇಡ.

- Call for authors -

LEAVE A REPLY

Please enter your comment!
Please enter your name here