ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡದು: ಬಿ.ಸಿ.ಪಾಟೀಲ್

0
4

ಕೊಪ್ಪಳ, ಮೇ 27: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಪರ ಹೋರಾಟ ಮಾಡಿಕೊಂಡು ಬಂದವರು. ನೀತಿ ನಿಯಮಗಳಡಿಯಲ್ಲಿಯೇ ಮೆಕ್ಕೆಜೋಳ ರೈತರಿಗೆ ಪರಿಹಾರ ಒದಗಿಸಲಾಗುವುದು.ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದಂತಹ ರೈತರಿಗೆ ಬೆಂಬಲ ಬೆಲೆ ನೀಡುವಂತಹ ಐತಿಹಾಸಿಕ ತೀರ್ಪನ್ನು ಮುಖ್ಯಮಂತ್ರಿಗಳು ಘೋಷಿಸಿದ್ದರು. 10 ಲಕ್ಷ ರೈತರಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 500 ಕೋಟಿ ರೂ.ಗಳ ಹಣ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರದಿಂದ ಮಂಗಳವಾರ ಮಾರ್ಗಸೂಚಿ ಹೊರಡಿಸಲಾಗಿದೆ.ಮಾರ್ಗಸೂಚಿಗಳಂತೆ ಫಲಾನುಭವಿಗಳ ಆಯ್ಕೆ ಮಾಡಿ ಸೂಕ್ತ ಆರ್ಥಿಕ ನೆರವು ನೀಡಲಾಗುವುದು ಎಂದರು.

ಹೋಬಳಿಮಟ್ಟದಿಂದ ರಾಜ್ಯಮಟ್ಟದವರೆಗೆ ಸಮಿತಿ ರಚನೆ:
ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನೊಳಗೊಂಡ ಹೋಬಳಿ ಮಟ್ಟದ ಸಮಿತಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನೊಳಗೊಂಡ ತಾಲೂಕು ಸಮಿತಿ,
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಉಪ ಕೃಷಿ ನಿರ್ದೇಶಕರನ್ನೊಳಗೊಂಡ ಸಮಿತಿ ಹಾಗೂ ಕೃಷಿ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕೃಷಿ ನಿರ್ದೇಶಕರು, ಅಪರ ಕೃಷಿನಿರ್ದೇಶಕರು ಮತ್ತು ಜಂಟಿ ಕೃಷಿನಿರ್ದೇಶಕರನ್ನೊಳಗೊಂಡ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ. ಸದ್ಯದಲ್ಲಿಯೇ ಮೆಕ್ಕೆಜೋಳ ರೈತರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಲಾಕ್ಡೌನ್ ಸಮಯದಲ್ಲಿ ಮೂವತ್ತು ಜಿಲ್ಲೆಗಳಿಗೆ ಮೂವತ್ತು ದಿನಗಳ ಕಾಲ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಅವಲೋಕಿಸಿ, ಕೈಗೊಂಡ ಕ್ರಮಗಳು ಸಲಹೆ ಸೂಚನೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ನೀಡಿದ ವರದಿಯಲ್ಲಿ ಬಹುತೇಕ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಬಿಜಾಪುರದಲ್ಲಿ ದ್ರಾಕ್ಷಿ ಆನ್ಲೈನ್ ಮಾರಾಟ, ಕೊಪ್ಪಳ ಅಕಾಲಿಕ ಮಳೆ ಬೆಳೆ ನಷ್ಟ ಪರಿಹಾರ , ತರಕಾರಿ, ಹೂವುಹಣ್ಣು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಿದೆ. ಮೆಕ್ಕೆಜೋಳ ಖರೀದಿಗೆ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. 1610 ಕೋಟಿ ರೂ.ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.

- Call for authors -

LEAVE A REPLY

Please enter your comment!
Please enter your name here