ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರದ ಮೂಲಕ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಕಾರ್ಯಕ್ರಮದ ವೇಳೆ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದರು.
ಸೋನಿಯಾ ಗಾಂಧಿ: ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ತಂತ್ರಜ್ಞಾನದ ಮೂಲಕ ಸಂಘಟಿಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿದು, ಉತ್ತಮ ಸಮಾಜಕ್ಕಾಗಿ ಜನರ ಆಂದೋಲನವಾಗಿದೆ. ಸದ್ಯ ಕರ್ನಾಟಕ ಸೇರಿದಂತೆ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕಿದೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಿದೆ ಎಂಬ ನಂಬಿಕೆ ಇದೆ. ಈ ಮಹತ್ವದ ಸಮಯದಲ್ಲಿ ಕೆಪಿಸಿಸಿಯ ಎಲ್ಲ ಸದಸ್ಯರಿಗೂ ಶುಭ ಕೋರುತ್ತೇನೆ.
ರಾಹುಲ್ ಗಾಂಧಿ: ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವು ಇದನ್ನು ಮಾಡುವ ವಿಶ್ವಾಸ ನನಗಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ.
ಪ್ರಿಯಾಂಕ ಗಾಂಧಿ: ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ನೀವು ಧೈರ್ಯದಿಂದ ಮುನ್ನುಗ್ಗಿ. ಪಕ್ಷವನ್ನು ಸದೃಢವಾಗಿ ಸಂಘಟಿಸಿ. ನಿಮಗೆ ಅಭಿನಂದನೆಗಳು.










